ಮಹಿಳಾ ಕ್ರಿಕೆಟ್ : ಭಾರತಕ್ಕೆ 2 ವಿಕೆಟ್ ಗಳ ರೋಚಕ ಜಯ
ಬೆಂಗಳೂರು : ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡ ರಣರೋಚಕ ಜಯ ಸಾಧಿಸಿದೆ.
ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಮಹಿಳಾ ತಂಡ ಸತತ 26 ಗೆಲುವಿನೊಂದಿಗೆ ನಡೆಸಿದ್ದ ವಿಶ್ವ ದಾಖಲೆಯ ಓಟಕ್ಕೆ ಭಾರತ ಬ್ರೇಕ್ ಹಾಕಿದೆ.
ಆಸ್ಟ್ರೇಲಿಯಾದ ಮೆಕೇನಲ್ಲಿರುವ ಹರುಪ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆತ್ಮವಿಶ್ವಾಸದಿಂದಲೇ ಕ್ರೀಸ್ ಗೆ ಬಂದ ಆಸೀಸ್ ತಂಡ ಭಾರತದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ (37ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ, 50 ಓವರ್‍ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 264 ರನ್‍ಗಳಿಸಿತು.
ಆಸ್ಟ್ರೇಲಿಯಾ ಪರ ಬೆತ್ ಮೂನಿ (52) ಮತ್ತು ಆಷ್ಲೇ ಗಾಡ್ರ್ನರ್ (67) ಅರ್ಧಶತಕಗಳನ್ನು ಭಾರಿಸಿದ್ದು, ಬಿಟ್ಟರೇ ಬೇರ್ಯಾರು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ.
ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಓಪನರ್‍ಗಳಾದ ಶಫಾಲಿ ವರ್ಮಾ (56) ಮತ್ತು ಸ್ಮೃತಿ ಮಂಧಾನಾ (22) ಮೊದಲ ವಿಕೆಟ್‍ಗೆ 59 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿದರು.
ಬಳಿಕ ಬ್ಯಾಟಿಂಗ್‍ಗೆ ಬಂದ ಯುವ ಪ್ರತಿ ಯಾಸ್ತಿಕಾ ಭಾಟಿಯಾ 69 ಎಸೆತಗಳಲ್ಲಿ 64 ರನ್ ಚೆಚ್ಚಿ ಔಟಾದರು.
ಇದಾದ ಬಳಿಕ ಭಾರತ ತಂಡ ಹಠಾತ್ ಕುಸಿತ ಕಂಡರೂ, ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ವರ್ಮಾ (31) ಮತ್ತು ಸ್ನೇಹಾ ರಾಣಾ (30) ಭರ್ಜರಿ ಬ್ಯಾಟಿಂಗ್ ನಡೆಸಿ ಭಾರತದ ಜಯದ ಹಾದಿ ಸುಲಭವನ್ನಾಗಿಸಿದರು.
ಅಂತಿಮವಾಗಿ ಇನ್ನು 3 ಎಸೆತಗಳು ಬಾಕಿ ಇರುವಾಗ ಭಾರತ ಜಯದ ನಗೆ ಬೀರಿತು.