ಸ್ಯಾಮ್ ಕರನ್ ಗೆ ಬೆನ್ನು ನೋವು.. ಐಪಿಎಲ್, ಟಿ-20 ವಿಶ್ವಕಪ್ ಟೂರ್ನಿಗೆ ಅಲಭ್ಯ
ಇಂಗ್ಲೆಂಡ್ ತಂಡದ ಆಲ್ ರೌಂಡರ್ ಸ್ಯಾಮ್ ಕರನ್ ಅವರು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ಸ್ಯಾಮ್ ಕರನ್ ಅವರು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರು ದುಬೈನಿಂದ ಇಂಗ್ಲೆಂಡ್ ಗೆ ಬರಲಿದ್ದು, ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ.
ಸ್ಯಾಮ್ ಕರನ್ ಬದಲು ಎಡಗೈ ವೇಗಿ ರಿಸ್ ಟಾಪ್ಲೆ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ನಡುವೆ ಸ್ಯಾಮ್ ಕರನ್ ಅವರ ಸಹೋದರ ಟಾಮ್ ಕುರನ್ ಕೂಡ ಇಂಗ್ಲೆಂಡ್ ತಂಡದಲ್ಲಿದ್ದಾರೆ. ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಐಪಿಎಲ್ ನಲ್ಲಿ ಸ್ಯಾಮ್ ಕುರನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯ ವೇಳೆ ಸ್ಯಾಮ್ ಕುರನ್ ಅವರು ಬೆನ್ನು ನೋವಿದೆ ಎಂದು ಹೇಳಿದ್ದರು.
ಬಳಿಕ ಸ್ಕ್ಯಾನಿಂಗ್ ಮಾಡಿದಾಗ ಸ್ಯಾಮ್ ಕುರನ್ ಅವರು ಬೆನ್ನು ನೋವು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿದು ಬಂದಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ತೆರಳಿದ್ದಾರೆ. 2021ರ ಇನ್ನುಳಿದ ಪಂದ್ಯಕ್ಕೂ ಸ್ಯಾಮ್ ಕುರನ್ ಅಲಭ್ಯರಾಗಲಿದ್ದಾರೆ.
ಬೆನ್ನು ನೋವು ಕಾಣಿಸಿಕೊಂಡಿದ್ದು ದುರಾದೃಷ್ಟ. ಐಪಿಎಲ್ ನ ಇನ್ನುಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವಿಶ್ವಕಪ್ ಟೂರ್ನಿಯನ್ನು ಮಿಸ್ ಮಾಡುತ್ತಿದ್ದೇನೆ. ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ವಿಶ್ವಾಸವನ್ನು ಸ್ಯಾಮ್ ಕುರನ್ ವ್ಯಕ್ತಪಡಿಸಿದ್ದಾರೆ.
23ರ ಹರೆಯದ ಸ್ಯಾಮ್ ಕುರನ್ ಅವರು ಇಲ್ಲಿಯವರೆಗೆ 24 ಟೆಸ್ಟ್ ಪಂದ್ಯ, 11 ಏಕದಿನ ಮತ್ತು 16 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ. ಕಳೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ಪರ ಆಡಿದ್ದರು.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಸ್ಯಾಮ್ ಕುರನ್ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಆಡಿರುವ 9 ಪಂದ್ಯಗಳಲ್ಲಿ 56 ರನ್ ಹಾಗೂ 9 ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಟಿ-ಟ್ವೆಂಟಿ ವಿಶ್ವಕಪ್ ತಂಡ ಅಕ್ಟೋಬರ್ 16ರಂದು ಯುಎಇಗೆ ಆಗಮಿಸಲಿದೆ.









