ತಿಣುಕಾಡಿ ಗೆದ್ದ ಆಸ್ಟ್ರೇಲಿಯಾ, ಕೊನೆಯ ಓವರ್ ನಲ್ಲಿ ಪಂದ್ಯ ಸೋತ ಆಫ್ರಿಕಾ
ಸೂಪರ್ 12ರ ಮೊದಲ ಪಂದ್ಯವೇ ಸಖತ್ ಥ್ರಿಲ್ ಆಗಿತ್ತು. ಅಬುಧಾಬಿ ಪಿಚ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳಿಗೆ ಅರ್ಥವೇ ಆಗಲಿಲ್ಲ. ಆದರೆ ಕೊನೆಯ ಓವರ್ ನಲ್ಲಿ ಗಟ್ಸ್ ಪ್ರದರ್ಶಿಸಿದ ಆಸ್ಟ್ರೇಲಿಯಾ 5 ವಿಕೆಟ್ ಗಳ ಜಯ ಸಾಧಿಸಿತು. ಗ್ರೂಪ್ ಆಫ್ ಡೆತ್ ಎಂದೇ ಕರೆಸಿಕೊಳ್ಳುವ ಗ್ರೂಪ್ 1ರ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.
ದುಬೈನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡಿತು. 2ನೇ ಓವರ್ ನಲ್ಲೇ ದಕ್ಷಿಣ ಆಫ್ರಿಕಾ ಆಘಾತ. ಮ್ಯಾಕ್ಸ್ ವೆಲ್ ನಾಯಕ ತೆಂಬ ಬವುಮಾರನ್ನು ಕ್ಲೀನ್ ಬೌಲ್ಡ್ ಮಾಡಿದ್ರು. ಹೇಜಲ್ ವುಡ್ ರಾಸಿ ವ್ಯಾಂಡರ್ ಡ್ಯುಸನ್ ಮತ್ತು ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದು ಹರಿಣಗಳಿಗೆ ಶಾಕ್ ನೀಡಿದರು.
ಏಡಿಯನ್ ಮಾರ್ಕರಾಂ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಆದ್ರೆ ಹೆನ್ರಿಚ್ ಕ್ಲಾಸನ್ 13 ರನ್ಗಳಿಸಿ ಔಟಾದರೆ, ಡೇವಿಡ್ ಮಿಲ್ಲರ್ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಮಾರ್ಕ್ ರಾಂ ಮಾತ್ರ 40 ರನ್ ಗಳಿಸಿ ಮಿಂಚಿದರು. 20 ಓವರುಗಳಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ ಕಳೆದುಕೊಂಡು 118 ರನ್ಗಳಿಸಿತ್ತು. ಆಸ್ಟ್ರೇಲಿಯಾದ ಪರವಾಗಿ ಸ್ಟಾರ್ಕ್, ಹೇಜಲ್ ವುಡ್ ಮತ್ತು ಝಂಪಾ ತಲಾ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ತಿಣುಕಾಡಿತು. ಫಿಂಚ್ ಶೂನ್ಯಕ್ಕೆ ಔಟಾದರೆ ವಾರ್ನರ್ 14 ರನ್ಗಳಿಸಿದರು. ಮಿಚೆಲ್ ಮಾರ್ಷ್ ಗಳಿಕೆ 11 ರನ್ ಮಾತ್ರ,. ಈ ಹಂತದಲ್ಲಿ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಇನ್ನಿಂಗ್ಸ್ ಕಟ್ಟಿದರು. ಆದರೆ ಸ್ಮಿತ್ 35 ರನ್ ಗಳಿಸಿ ಔಟಾದರು. ಇವರ ಬೆನ್ನಲ್ಲೇ 18 ರನ್ ಗಳಿಸಿದ ಮ್ಯಾಕ್ಸ್ ವೆಲ್ ಕೂಡ ಔಟಾದರು. ಆಸ್ಟ್ರೇಲಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.
ಕೊನೆಯ ಓವರ್ ನಲ್ಲಿ ಆಸೀಸ್ ಗೆಲುವಿಗೆ 9 ರನ್ ಗಳು ಬೇಕಿತ್ತು. ಸ್ಲೋ ಪಿಚ್ ಆಗಿದ್ದರೂ ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ತಂಡಕ್ಕೆ ಗೆಲುವು ತಂದುಕೊಟ್ಟರು. ಸ್ಟೋಯ್ನಿಸ್ ಅಜೇಯ 24 ರನ್ಗಳಿಸಿದರೆ, ವೇಡ್ 15 ರನ್ಗಳಿಸಿ ಅಜೇಯರಾಗುಳಿದರು. ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಆಟ ಆರಂಭಿಸಿತು.









