ICC ಟೂರ್ನಿಗಳಲ್ಲಿ ಕಾಂಗರೂಗಳ ಆರ್ಭಟ- ಎದುರಾಳಿಯ ಎದೆ ನಡುಗಿಸುತ್ತೆ ಆಸೀಸ್ ಟೀಮ್ ಆಟ
ಆಸ್ಟ್ರೇಲಿಯಾ ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡ. ಫಾರ್ಮ್ ಇರ್ಲಿ, ಇಲ್ದೇ ಇರಲಿ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಅಂದರೆ ಎದೆ ನಡುಗಿಸುವ ಪ್ರದರ್ಶನ ಹೊರಬರುತ್ತದೆ.
ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಹೀಗೆ ಆಸ್ಟ್ರೇಲಿಯಾ ನಿಗದಿತ ಓವರುಗಳ ಕ್ರಿಕೆಟ್ನಲ್ಲಿ ಐಸಿಸಿ ಆತಿಥ್ಯ ನೀಡುವ ಎಲ್ಲಾ ಟ್ರೋಫಿಗಳನ್ನು ತನ್ನ ಮಡಿಲು ಸೇರಿಸಿಕೊಂಡಿದೆ.
5 ಏಕದಿನ ವಿಶ್ವಕಪ್:
ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ನಲ್ಲಿ 5 ಬಾರಿ ಚಾಂಪಿಯನ್ ಆಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ 2 ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದವು. ಉಳಿದ ಯಾವ ತಂಡ ಕೂಡ ಆಸ್ಟ್ರೇಲಿಯಾದ ಹತ್ತಿರಕ್ಕೂ ಸುಳಿದಿಲ್ಲ. 1987, 1999, 2003, 2007 ಮತ್ತು 2015ರಲ್ಲಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ನ ವಿಶ್ವ ಚಾಂಪಿಯನ್ ಆಗಿತ್ತು. ಅದರಲ್ಲೂ 1999, 2003 ಮತ್ತು 2007ರಲ್ಲಿ ಸತತ 3 ಬಾರಿ ಏಕದಿನ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಸಾಧಿಸಿತ್ತು.
2 ಚಾಂಪಿಯನ್ಸ್ ಟ್ರೋಫಿ
ಏಕದಿನ ಕ್ರಿಕೆಟ್ನ ಮಿನಿ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಸ್ಟ್ರೇಲಿಯಾ ಮಿಂಚು ಹರಿಸಿದೆ. 2006 ಮತ್ತು 2009ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.
1 ಟಿ20 ವಿಶ್ವಕಪ್
ಟಿ20 ವಿಶ್ವಕಪ್ ಆಸ್ಟ್ರೇಲಿಯಾದ ಪಾಲಿಗೆ ಮರೀಚಿಕೆ ಆಗಿತ್ತು. ಆದರೆ ದುಬೈನಲ್ಲಿ ಅದನ್ನೂ ಕೂಡ ಹಿಡಿದು ತನ್ನ ಬೊಗಸೆ ಸೇರಿಸಿಕೊಂಡಿದೆ. 2010ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಈಗ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದೆ. ಈ ಮೂಲಕ ಐಸಿಸಿ ಟೂರ್ನಿಯಲ್ಲಿ ನಿಗದಿತ ಓವರುಗಳಲ್ಲಿ ಎಲ್ಲಾ ಪ್ರಶಸ್ತಿ ಗೆದ್ದ ತಂಡವಾಗಿ ಇತಿಹಾಸ ಸೇರ್ಪಡೆ ಆಗಿದೆ.