ಮಾರ್ಚ್ ವೇಳೆಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಫ್ಲೈ ಓವರ್ ಲೋಕಾರ್ಪಣೆ : ವಿ.ಸೋಮಣ್ಣ V. Somanna saaksha tv
ಬೆಂಗಳೂರು- ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಗೋವಿಂದರಾಜ ನಗರದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಕಾಮಗಾರಿಯ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಬರುವ ಮಾರ್ಚ್ ವೇಳೆಗೆ ಈ ಫ್ಲೈ ಓವರ್ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಮಾಗಡಿ ರಸ್ತೆಯ ಚಿತ್ರಣವನ್ನೇ ಬದಲು ಮಾಡುವ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತದಲ್ಲಿವೆ.
ಮಾಗಡಿ ಮುಖ್ಯರಸ್ತೆಯ ಸುಮನಹಳ್ಳಿ ಜಂಕ್ಷನ್ ವರೆಗೂ ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಲಿದೆ. ಇದರ ಜೊತೆಗೆ ಭೂಗತ ಕೇಬಲ್ ಕಾಮಗಾರಿ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಅಗಸ್ಟ್ ನಲ್ಲಿ ಕೈಗೆತ್ತಿಕೊಳ್ಳಲಾದ ಭೂಗತ ಕೇಬಲ್ ಅಳವಡಿಸುವಿಕೆಯ ಕಾಮಗಾರಿ ಶೇ.50 ರಷ್ಟು ಮುಗಿದಿದೆ. ಕ್ಷೇತ್ರಾದ್ಯಂತ ನೂತನ ಪಾರ್ಕ್ಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ, ಆಸ್ಪತ್ರೆಗಳ ನಿರ್ಮಾಣ ಹಾಗೂ ಶಾಲೆಗಳ ನವೀಕರಣ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ. ಈ ಮೂಲಕ ಕ್ಷೇತ್ರದ ಜನತೆ ನೀಡಿದ ಅಮೂಲ್ಯ ಮತಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









