TEST ಕ್ಲಾಸ್ ಗೂ ಮಾಸ್ ಗೂ “ವಿರಾಟ್” ಬಾಸ್
ಟೀಂ ಇಂಡಿಯಾದ ರನ್ ಮಿಷನ್, ಆಧುನಿಕ ಕ್ರಿಕೆಟ್ ನ ನಯಾ ಡಾನ್, ಕಿಂಗ್ ವಿರಾಟ್ ಕೊಹ್ಲಿ ಇಂದು ತಮ್ಮ ವೃತ್ತಿ ಜೀವನದ ನೂರನೇ ಪಂದ್ಯವನ್ನಾಡುತ್ತಿದ್ದಾರೆ.
ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯದ ಗೌರವವನ್ನು ಪಡೆದಿದ್ದಾರೆ.
ಪಂದ್ಯಕ್ಕೂ ಮುನ್ನಾ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿಗೆ ನೂರನೇ ಟೆಸ್ಟ್ ಪಂದ್ಯದ ಕ್ಯಾಪ್ ನೀಡಿ ಗೌರವಿಸಿದರು. ಅಲ್ಲದೇ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯವನ್ನ ನೋಡಲು ಭಾರತೀಯ ಕ್ರಿಕೆಟ್ ದಿಗ್ಗಜರೆಲ್ಲರೂ ಮೊಹಾಲಿ ಮೈದಾನಲ್ಲಿ ಉಪಸ್ಥಿತರಿದ್ದಾರೆ.
ಅಂದಹಾಗೆ ಟೀಂ ಇಂಡಿಯಾದ ಪರ ಟೆಸ್ಟ್ ಆಡುವುದು ಅಂದರೆ ಸೌಭಾಗ್ಯ. 100 ಟೆಸ್ಟ್ ಪಂದ್ಯ ಆಡುವುದು ಅಂದರೆ ಅದು ಅದೃಷ್ಟ. ಅಂತಹ ಅದೃಷ್ಟ ಪಡೆದ ಕೆಲವೇ ಕೆಲವು ಆಟಗಾರರು ಟೀಮ್ ಇಂಡಿಯಾದಲ್ಲಿ ಆಡಿದ್ದಾರೆ. ಈ ಅದೃಷ್ಟವಂತರ ಲಿಸ್ಟ್ಗೆ ಈಗ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.
ಅಂಡರ್ 19 ವಿಶ್ವಕಪ್ ಗೆದ್ದ ನಾಯಕನಾಗಿ ಟೀಂ ಇಂಡಿಯಾದ ಗರ್ಭಗುಡಿ ಪ್ರವೇಸಿದ್ದ ವಿರಾಟ್, ಮೊದಲು ಬ್ಯಾಟರ್ ಆಗಿ ತಂಡದ ಬ್ರಹ್ಮಾಸ್ತ್ರವಾಗಿ ಬೆಳೆದರು. ಧೋನಿ ವಿದಾಯದ ಬಳಿಕ ಟೀಂ ಇಂಡಿಯಾದ ಸಾರಥ್ಯವಹಿಸಿಕೊಂಡ ವಿರಾಟ್ ಟೀಂ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ವನ್ ತಂಡವಾಗಿಸಿದ್ದರು. ಈಗ 100ನೇ ಟೆಸ್ಟ್ ಆಡುತ್ತಿದ್ದಾರೆ.
ವಿರಾಟ್ಗೂ ಮುನ್ನ ಭಾರತ 11 ಆಟಗಾರರು ಈ ಸಾಧನೆ ಮಾಡಿದ್ದಾರೆ. ಮೊಹಾಲಿಯಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಭಾರತದ ಪರ 100 ಟೆಸ್ಟ್ ಆಡಿದ 12ನೇ ಆಟಗಾರನಾಗಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಮೇಲೆ ವಿಶೇಷವಾದ ಗೌರವವಿದೆ. ನನ್ನ ಪ್ರಕಾರ ನಿಜವಾದ ಕ್ರಿಕೆಟ್ ಅಂದ್ರೆ ಟೆಸ್ಟ್ ಕ್ರಿಕೆಟ್ ಎಂದಿದ್ದ ಆಧುನಿಕ ಕ್ರಿಕೆಟ್ ನ ಏಕೈಕ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ. ಜೊತೆಗೆ ಟೆಸ್ಟ್ ಕ್ರಿಕೆಟ್ ಕಥೆ ಮುಗೀತು ಅನ್ನೋ ಸಂದರ್ಭದಲ್ಲಿ ಟೆಸ್ಟ್ ಗೆ ಹೊಸ ಚೈತನ್ಯ ತುಂಬಿದ ಆಟಗಾರ ವಿರಾಟ್ ಕೊಹ್ಲಿ, ಇದನ್ನ ವಿಶ್ವ ಕ್ರಿಕೆಟ್ ದಿಗ್ಗಜರು ಸಾರಿ ಹೇಳಿದ್ದಾರೆ.
ಇದರಲ್ಲದೇ ವಿರಾಟ್ ಕೊಹ್ಲಿ ಟೆಸ್ಟ್ ಗೆ ದೊಡ್ಡ ಪೀಠ ಹಾಕಿದ್ದಾರೆ. ಟೆಸ್ಟ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅದಕ್ಕೆ ಅವರ ದಾಖಲೆಗಳೇ ಸಾಕ್ಷಿಯಾಗಿವೆ.
100 ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರು
- ಸಚಿನ್ ತೆಂಡುಲ್ಕರ್ 200
- ರಾಹುಲ್ ದ್ರಾವಿಡ್ 163
- ವಿವಿಎಸ್ ಲಕ್ಷ್ಮಣ್ 134
- ಅನಿಲ್ ಕುಂಬ್ಳೆ 132
- ಕಪಿಲ್ ದೇವ್ 131
- ಸುನೀಲ್ ಗವಾಸ್ಕರ್ 125
- ದಿಲೀಪ್ ವೆಂಗ್ಸರ್ಕಾರ್ 116
- ಸೌರವ್ ಗಂಗೂಲಿ 113
- ಇಶಾಂತ್ ಶರ್ಮಾ 105
- ಹರ್ಭಜನ್ ಸಿಂಗ್ 103
- ವೀರೇಂದ್ರ ಸೆಹ್ವಾಗ್ 103