Khatu Shyam temple | ದೇವಸ್ಥಾನದಲ್ಲಿ ಕಾಲ್ತುಳಿತ : 3 ಸಾವು!
ಜೈಪುರ : ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಸಿಕಾರ್ ನಲ್ಲಿರುವ ಖತು ಶ್ಯಾಮ್ ದೇವಸ್ಥಾನದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಜೈಪುರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಇಂದು ದೇವರ ದರ್ಶನಕ್ಕೆ ಒಳ್ಳೆ ದಿನ ಎಂದು ಪರಿಗಣಿಸಲಾಗುತ್ತದೆ.
ಹೀಗಾಗಿ ಮುಂಜಾನೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಹೊರಗೆ ದೊಡ್ಡ ಜನಸಮೂಹವೇ ಜಮಾಯಿಸಿತ್ತು.
ದೇವಾಲಯದ ಗೇಟ್ ತೆರೆಯುತ್ತಿದ್ದಂತೆ ಭಕ್ತರು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿದ್ದಾರೆ.
ಇದರಿಂದ ಅವರ ಹಿಂದೆ ಇದ್ದವರು ಕೆಳಗೆ ಬಿದ್ದಿದ್ದಾರೆ. ಆಗ ಈ ಕಾಲ್ತುಳಿತ ಸಂಭವಿಸಿದ್ದು, ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಪನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.