Minister V. Somanna | ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ ಕಾಮಗಾರಿ ಪರಿಶೀಲನೆ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ “ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ ” ಕಾಮಗಾರಿಯ ಸ್ಥಳವನ್ನು ಮಾನ್ಯ ವಸತಿ ಹಾಗೂ ಮೂಲಸೌಲಭ್ಯ ಸಚಿವ ವಿ.ಸೋಮಣ್ಣ ರವರು ಪರಿಶೀಲನೆ ನಡೆಸಿದರು.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಸಲುವಾಗಿ ಮಂಜುನಾಥನಗರದ ಬಳಿ ಮೇಲುಸೇತುವೆ, ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆ ಹಾಗೂ ಬಸವೇಶ್ವರ ನಗರ ವೃತ್ತದ ಏಕಮುಖ ಸಂಚಾರದ ಬಳಿ ಮೇಲುಸೇತುವೆಯ ಗ್ರೇಡ್ ಸೆಪರೇಟರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಅದರಂತೆ, ಮಂಜುನಾಥನಗರ ಬಳಿ 18.18 ಕೋಟಿ ರೂ. ವೆಚ್ಚದಲ್ಲಿ 270.62 ಮೀ ಉದ್ದದ ಮೇಲುಸೇತುವೆಯನ್ನು ದಿನಾಂಕ: 27.08.2018 ರಂದು ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವುಮಾಡಲಾಗಿರುತ್ತದೆ. ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆಯ ಬದಲಾಗಿ 71.98 ಕೋಟಿ ರೂ. ವೆಚ್ಚದಲ್ಲಿ 655 ಮೀಟರ್ ಉದ್ದದ ಮೇಲುಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಂಡು ದಿನಾಂಕ: 04.10.2021 ರಂದು ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಲಾಗಿರುತ್ತದೆ.

ಇನ್ನು ಶಿವನಗರ ನಂತರದ ಜಂಕ್ಷನ್‌ಗಳಾದ ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲುಸೇತುವೆ ನಿರ್ಮಾಣದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಬಸವೇಶ್ವರ ಜಂಕ್ಷನ್ ಬಳಿ ಹೆಚ್ಚುವರಿ ಏಕಮುಖ ಸಂಚಾರದ ಮೇಲುಸೇತುವೆಯನ್ನು 54.63 ಕೋಟಿ ರೂ. ವೆಚ್ಚದಲ್ಲಿ ಒಟ್ಟು 735 ಮೀಟರ್ ಉದ್ದದ ಮೇಲುಸೇತುವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ನವೆಂಬರ್-2022ರ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್, ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಲೋಕೇಶ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.








