H D Kumaraswamy | ಡಾ.ಸುಧಾಕರ್ ಅವರೇ ಮನುಷ್ಯತ್ವ ಇದೆಯಾ ನಿಮಗೆ?
ಬೆಂಗಳೂರು : ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಜೀವ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ನಲ್ಲಿ..
ಮಾನ್ಯ ಸಚಿವ ಡಾ.ಕೆ.ಸುಧಾಕರ್ ಅವರೇ; ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ʼಸಾವುಗೇಡಿ ಸರಕಾರʼದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ?
ಡಾ.ಸುಧಾಕರ್ ಅವರೇ; ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ.
ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ & ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ.
ಇಂಥ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ?
ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಆತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.