‘ಸಮುದ್ರ ಸೇತು’ ಹೀರೋ ‘ INS ಜಲಾಶ್ವ ‘..! SALUTE TO INDIAN ARMY
೨೦೧೯ ರ ನವೆಂಬರ್ ಡಿಸೆಂಬರ್ ನಲ್ಲಿ ಕಾಣಿಸಿಕೊಂಡ ಕೋವಿಡ್ ೧೯ ವೈರಸ್ ೨೦೨೦ ರ ಫೆಬ್ರುವರಿಯ ವರೆಗೂ ಚೀನಾಕ್ಕೆ ಸೀಮಿತವಾಗಿತ್ತು. ಕೋವಿಡ್ ರೋಗ ಮಾರ್ಚ್ 28ರ ವೇಳೆಗೆ ಜಗತ್ತಿನ 177 ರಾಷ್ಟ್ರಗಳಲ್ಲಿ ವ್ಯಾಪಿಸಿ 6.21 ಲಕ್ಷ ಜನರು ಕೋವಿಡ್-19ರ ಸೋಂಕಿಗೆ ಒಳಗಾದ ಪ್ರಕರಣಗಳು ದಾಖಲಾಗಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಯಾಯಿತು. ಬಳಿಕ ಎಲ್ಲೆಡೆ ಕೋವಿಡ್ ಮೊದಲ ಅಲೆ ಆರಂಭವಾಯಿತು. ವೈರಸ್ ಹರಡುವಿಕೆಯ ನಿಯಂತ್ರಣಕ್ಕೆ ಹಲವು ದೇಶಗಳು ಲಾಕ್ಡೌನ್ ಹೇರಲು ಆರಂಭಿಸಿದವು.
ಈ ವೇಳೆ ವಿದೇಶಗಳಲ್ಲಿ ಲಕ್ಷಾಂತರ ಭಾರತೀಯರು ಭಾರತಕ್ಕೆ ಬರಲಾಗದೇ ಸಿಲುಕಿ ಸಂಕಷ್ಟದಲ್ಲಿದ್ದರು. ಅರೆ.. ಭಾರತೀಯ ನೌಕಾಸೇನೆಯ ನೌಕೆಗಳಬಗ್ಗೆ ಮಾಹಿತಿ ನೀಡುತ್ತೇವೆಂದು ಇದೆಲ್ಲವನ್ನು ಯಾಕೆ ಹೇಳ್ತಿದಾರೆ ಅಂದುಕೊಂಡ್ರಾ? ಅಸಲು ಏನೆಂದ್ರೆ ಹೀಗೆ ವಿದೇಶಗಳಲ್ಲಿ ಸಹಾಯಹಸ್ತಕ್ಕಾಗಿ ಕಾದು ಕುಳಿತಿದ್ದ ಲಕ್ಷಾಂತರ ಭಾರತೀಯರ ನೆರವಿಗೆ ಬಂದವರಲ್ಲಿ ಭಾರತೀಯ ನೌಕಾಸೇನೆಯೂ ಒಂದು. ಸಮುದ್ರ ಸೇತು ಎಂಬ ಅಭಿಯಾನದ ಮೂಲಕ ಲಕ್ಷ ಲಕ್ಷ ಭಾರತೀಯರನ್ನು ತಾಯ್ನಾಡಿಗೆ ಹೊತ್ತು ತಂದಿದ್ದು ನೌಕಾಸೇನೆಯ ನೌಕೆಗಳು. ಅದರಲ್ಲೂ ಐಎನ್ಎಸ್ ಜಲಾಶ್ವ ಸಮುದ್ರ ಸೇತು ಅಭಿಯಾನದ ಹೀರೋ ಎಂದರೆ ತಪ್ಪಾಗಲಾಗದು.
ಪ್ರಸ್ತುತ ಭಾರತೀಯ ನೌಕಾ ಸೇನೆಯ ಸೇವೆಯಲ್ಲಿರುವ ಐ.ಎನ್.ಎಸ್ ಜಲಾಶ್ವ ನೌಕೆಯು ಮೊದಲು ಯು.ಎಸ್.ಎಸ್ ಟ್ರೆಂಟಾನ್ ಎಂದು ಕರೆಯಲ್ಪಡುತ್ತಿತ್ತು. ಈ ನೌಕೆಯನ್ನು ಭಾರತವು ೪೮ ಮಿಲಿಯನ್ ಯು.ಎಸ್. ಡಾಲರ್’ಗಳಿಗೆ ಅಮೇರಿಕಾದಿಂದ ಖರೀದಿಸಿತು. ೨೦೦೭ರಲ್ಲಿ ಕಾರ್ಯಾರಂಭಿಸಿದ ಇದು ಭಾರತೀಯ ನೌಕಾ ಸೇನೆಯ ಎರಡನೆಯ ಬೃಹತ್ ನೌಕೆಯಾಗಿದೆ.
ವಿಶಾಖಪಟ್ಟಣದ ನೌಕಾ ನೆಲೆಗೆ ೧೨ ಸಪ್ಟೆಂಬರ್, ೨೦೦೭ರಂದು ಆಗಮಿಸಿದ ಇದು ಭಾರತೀಯ ನೌಕಾ ಸೇನೆಯ ಪೂರ್ವ ಭಾಗಕ್ಕೆ ನಿಯೋಜನೆಗೊಂಡಿತು.ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಸ್ ಕರೆತರುವ ವಂದೇ ಭಾರತ್ ಮಿಷನ್ ಕಾರ್ಯಾಚರಣೆ ಅಂಗವಾಗಿ ‘ಸಮುದ್ರ ಸೇತು’ ಕಾರ್ಯಾಚರಣೆಯ ಎರಡನೇ ಹಂತದ ಅಡಿಯಲ್ಲಿ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಜಲಾಶ್ವ ಹತ್ತಾರು ದೇಶಗಳಿಗೆ ತೆರಳಿ ನಮ್ಮವರನ್ನು ಸೇಫ್ ಆಗಿ ಮರಳಿಸಿತು.
ಮಾಲ್ಡೀವ್ಸ್, ಸಿಂಗಾಪುರ್, ಅರಬ್ ದೇಶಗಳು, ಥಾಯ್ಲೆಂಡ್ ಸೇರಿದಂತೆ ಕೆಲ ದೇಶಗಳಿಗೆ ಐಎನ್ಎಸ್ ಜಲಾಶ್ವ ತೆರಳಿತ್ತು. ಇಷ್ಟೇ ಅಲ್ಲದೇ, ಎರಡನೇ ಕರೋನಾ ಅಲೆಗೆ ತತ್ತಿರಿಸಿದ ಭಾರತಕ್ಕೆ ಬೇಕಾದ ಆಕ್ಸಿಜನ್ ತರಲು ನಿಯೋಜಿಸಿದ ನೌಕೆಗಳಲ್ಲಿ ಐಎನ್ಎಸ್ ಜಲಾಶ್ವ ಮುಂದಾಳತ್ವ ವಹಿಸಿದೆ. ವಿದೇಶಗಳಿಂದ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್) ತರುವ ಸಲುವಾಗಿ ಭಾರತೀಯ ನೌಕಾಪಡೆಯು ಯುದ್ಧನೌಕೆಗಳನ್ನು ನಿಯೋಜನೆ ಮಾಡಿದೆ.
ಮೊದಲ ಹಂತದಲ್ಲಿ ಬಹ್ರೈನ್, ಸಿಂಗಾಪುರ ಮತ್ತು ಥಾಯ್ಲೆಂಡ್‌ಗಳಿಂದ ಆಮ್ಲಜನಕ ತರಲು ನೌಕೆಗಳನ್ನು ನಿಯೋಜಿಸಲಾಗಿದೆ. ಮುಂಬೈಗೆ 40 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕ ತರುವ ಸಲುವಾಗಿ ಐಎನ್‌ಎಸ್ ಕೋಲ್ಕತ್ತ ಮತ್ತು ಐಎನ್‌ಎಸ್ ತಲ್ವಾರ್‌ಗಳು ಈಗಾಗಲೇ ಬಹ್ರೈನ್‌ನ ಮನಾಮ ಬಂದರು ತಲುಪಿವೆ. ಐಎನ್‌ಎಸ್ ಜಲಾಶ್ವ ಬ್ಯಾಂಕಾಂಕ್ ತಲುಪಿದ್ದು, ಐಎನ್‌ಎಸ್ ಐರಾವತ್ ಸಿಂಗಾಪುರಕ್ಕೆ ತೆರಳಿದೆ.
‘ದೇಶದ ಆಮ್ಲಜನಕ ಬೇಡಿಕೆ ಪೂರೈಸುವ ಸಲುವಾಗಿ ಭಾರತೀಯ ನೌಕಾಪಡೆಯು ‘ಆಪರೇಷನ್ ಸಮುದ್ರ ಸೇತು–2 ಹಮ್ಮಿಕೊಂಡಿದೆ’ ಎಂದು ನೌಕಾಪಡೆ ಹೇಳಿದೆ. ಹೀಗೆ ನೌಕಾಪಡೆಯ ಐಎನ್ಎಸ್ ಜಲಾಶ್ವ ಕೇವಲ ಜಲಮಾರ್ಗದ ಕಂಟಕಗಳನ್ನು ತಡೆಯದೇ ಸಹಸ್ರ ಭಾರತೀಯರನ್ನು ತಾಯ್ನಾಡಿಗೆ ಕರೆತಂದು ಹೀರೋ ಎನಿಸಿದೆ.