“ಜನರ ಜೀವ ರಕ್ಷಿಸದ ಈ ಸರ್ಕಾರ ತೊಲಗುವುದೇ ಲೇಸು” : ಸಿದ್ದರಾಮಯ್ಯ
ಬೆಂಗಳೂರು : ಜನರ ಜೀವ ರಕ್ಷಿಸಲಾಗದ ಇಂಥಾ ಸರ್ಕಾರ ಇರುವುದಕ್ಕಿಂತ ತೊಲಗುವುದೇ ಲೇಸು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಮೃತಪಟ್ಟ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಉಂಟಾಗಿರುವ ಸರಣಿ ಸಾವುಗಳ ಮುಂದುವರೆದ ಭಾಗವಿದು. ಈ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರ, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು ದೂರಿದ್ದಾರೆ.
ಇನ್ನು ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಪ್ರಕರಣ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದುಬಿದ್ದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಬಿಜೆಪಿ ಅವರ ಅಧಿಕಾರದ ಲಾಲಸೆಗೆ ಇನ್ನಷ್ಟು ಅಮಾಯಕ ಜನರು ಬಲಿಯಾಗುವುದು ಬೇಡ. ಜನರ ಜೀವ ರಕ್ಷಿಸಲಾಗದ ಇಂಥಾ ಸರ್ಕಾರ ಇರುವುದಕ್ಕಿಂತ ತೊಲಗುವುದೇ ಲೇಸು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಕರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣದ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.