ಹದ್ದಿನ ಕಣ್ಣಿಟ್ಟು ದೇಶ ರಕ್ಷಣೆಯಲ್ಲಿ ನಿರತವಾಗಿರುವ ‘ಮಿಗ್’..!!
ಭಾರತವನ್ನು ವಾಯುಮಾರ್ಗಗಳಿಂದ ಬರುವ ಕಂಟಕಗಳಿಂದ ರಕ್ಷಿಸುವ ಕಾರ್ಯ ವಾಯುಸೇನೆಯದ್ದು. ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು. ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ.
ಸಾಕಷ್ಟು ಬಾಂಬರ್ಗಳು, ಫೈಟರ್ ಜೆಟ್ಗಳು, ತರಬೇತಿ ವಿಮಾನಗಳು, ಹೆಲಿಕಾಪ್ಟರ್ ಗಳನ್ನು ಹೊಂದಿರುವ ಭಾರತೀಯ ವಾಯುಸೇನೆ ವಿಶ್ವದ ಸುಸಜ್ಜಿತ ವಾಯುಸೇನೆಗಳಲ್ಲಿ ಒಂದು. ಅದರಲ್ಲೂ ಭಾರತೀಯ ವಾಯುಸೇನೆಯ ಮಿಗ್ ಶ್ರೇಣಿಯ ವಿಮಾನಗಳು ಶತ್ರುಗಳಿಗೆ ಸಿಂಹಸ್ವಪ್ನ. ಮಿಗ್-೨೯, ಮಿಗ್-೨೭ ML, ಮಿಗ್-೨೫ U, ಮಿಗ್-೨೫ R , ಮಿಗ್-೨೧ Bison, ಮಿಗ್-೨೧ F-13 ಸೇರಿದಂತೆ ಅನೇಕ ಮಿಗ್ ವಿಮಾನಗಳು ದೇಶ ರಕ್ಷಣೆಗೆ ಬದ್ಧವಾಗಿವೆ.
ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್ ಜೆಟ್ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್–21 ವಿಮಾನಕ್ಕೆ ಅಗ್ರ ಸ್ಥಾನ. 1955ರಲ್ಲಿ ತಯಾರಾದ ಈ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ.
ಆದರೆ, ನಿವೃತ್ತಿಯ ಅಂಚಿನಲ್ಲಿರುವ ಈ ವಿಮಾನಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ನಂತರವೂ ಅವನ್ನು ಬಳಸುತ್ತಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಕಳೆದ 40 ವರ್ಷಗಳಲ್ಲಿ ಮಿಗ್–21 ಯುದ್ಧ ವಿಮಾನಗಳು ಹಲವು ಬಾರಿ ಪತನಗೊಂಡಿವೆ. ಭಾರತ 872 ಮಿಗ್ ವಿಮಾನಗಳಲ್ಲಿ ಅರ್ಧದಷ್ಟು ಕಳೆದುಕೊಂಡಿದೆ. 1973–74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್–21 ಯುದ್ಧ ವಿಮಾನ ಸೇರ್ಪಡೆಯಾಯಿತು. 2006ರಲ್ಲಿ ಕನಿಷ್ಠ 110 ಮಿಗ್–21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು.
ಈ ಶ್ರೇಣಿಯ ಯುದ್ಧವಿಮಾನಗಳು ಹಲವು ಯಶಸ್ವಿ ಕಾರ್ಯಾಚರಣೆಯ ಭಾಗವಾಗಿವೆ. ಹದ್ದಿನ ಕಣ್ಣಿಟ್ಟು ದೇಶ ರಕ್ಷಣೆಯಲ್ಲಿ ಮಿಗ್ ವಿಮಾನಗಳು ದಶಕಗಳಿಂದ ನಿರತವಾಗಿವೆ. ಮುಂದಿನ ಸಂಚಿಕೆಗಳಲ್ಲಿ ಮತ್ತಷ್ಟು ಯುದ್ಧವಿಮಾನಗಳ ಮಾಹಿತಿಯನ್ನು ತಿಳಿಯೋಣ.