ತಂದೆಗೆ ಔಷಧಿ ತಲುಪಿಸಲು ಪರದಾಡುತ್ತಿದ್ದ ಮಗನ ನೆರವಿಗೆ ಬಂದ ಸಂಸದ
ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ರೂಪಾಂತರ ಕೊರೊನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಲವರು ತುರ್ತು ವೈದ್ಯಕೀಯ ವ್ಯವಸ್ಥೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಗನೊಬ್ಬ ತಂದೆಯಗೆ ಔಷದಿ ತಲುಪಿಸಲು ಕಳೆದ ನಾಲ್ಕೈದು ದಿನಗಳಿಂದ ಪರದಾಟ ನಡೆಸಿ ಕೊನೆಗೆ ಸಂಸದರ ಮೊರೆ ಹೋಗಿರುವ ಘಟನೆ ನಡೆದಿದೆ.
ಸ್ನೇಹಿತ ಕೊಟ್ಟ ಒಂದೇ ಒಂದು ಪೋನ್ ಕರೆಗೆ ಚಿತ್ರದುರ್ಗ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಸ್ಪಂದಿಸಿ, ಯುವಕನ ತಂದೆಗೆ ಔಷಧಿ ತಲುಪಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮದ್ದನಕುಂಟೆ ಗ್ರಾಮದ ಚಂದ್ರಪ್ಪ ಎನ್ನುವರಿಗೆ ಬೆಂಗಳೂರಿನ ನಾರಾಯಣ ಹೃದಯಲಾಯದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಹೊಸ ಕಣ್ಣು ಹಾಕಿಸಿದ್ದರಿಂದ ಚಂದ್ರಪ್ಪನ ಕಣ್ಣಿಗೆ ಪ್ರತಿನಿತ್ಯ ಡ್ರಾಪ್ಸ್ ಬೀಡಬೇಕು. ಆದರೆ ಡ್ರಾಪ್ಸ್ ಏಕಾಏಕಿ ಖಾಲಿಯಾಗಿದ್ದರಿಂದ ತಂದೆ ಬೆಂಗಳೂರು ಚಂದಾಪುರ ಬಳಿ ಇರುವ ಬನಹಳ್ಳಿಯಲ್ಲಿ ಕೆಲಸ ಮಾಡುತಿದ್ದ ಮಗ ಮುರುಳಿಧರಗೆ ಕರೆ ಮಾಡಿ ಔಷದಿ ಖಾಲಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಅಷ್ಟೋತಿಗಾಗಲೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಮುರುಳಿಧರ ತೊಂದರೆಗೆ ಸಿಲುಕಿಕೊಂಡು ತಂದೆಗೆ ಔಷಧಿ ತಲುಪಿಸಲು ಹರಸಾಹಸ ಪಡಬೇಕಾಯಿತು. ಕೋರಿಯರ್, ಪೋಸ್ಟ್ ಮೂಲಕ ಕಳಿಸಲು ಪ್ರಯತ್ನ ನಡೆಸಿದ್ದು ಸಫಲವಾಗಿಲ್ಲ.
ಬಳಿಕ ಸಂಸದರ ಪಿಎ ಷಣ್ಮುಖ ಅವರನ್ನು ಸಂಪರ್ಕಿಸಿದಾಗ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು. ಕೊನೆಗೆ ನೇರವಾಗಿ ಸ್ನೇಹಿತನ ಕಡೆಯಿಂದ ಸಂಸದರ ನಂಬರ್ ಪಡೆದುಕೊಂಡು ಎ. ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು ಕೂಡಲೇ ಸ್ಪಂದಿಸಿದ್ದಾರೆ. ಯುವಕನ ತಂದೆಗೆ ಇಂದು ಔಷಧಿ ತಲುಪಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಸಂಸದರ ಈ ಕಾರ್ಯಕ್ಕೆ ಮುರುಳಿಧರ ಹರ್ಷ ವ್ಯಕ್ತಪಡಿಸಿದ್ದಾರೆ.