ಹೊಳೆ ಬಸವೇಶ್ವರನಿಗೆ ಘಟಪ್ರಭಾ ಜಲದಿಗ್ಬಂಧನ
ಬಾಗಲಕೋಟೆ : ಕಳೆದೊಂದು ವಾರದಿಂದ ಖಾನಾಪುರ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಘಟಪ್ರಭಾ ನದಿಯಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲಕಂಟಕ ಎದುರಾಗಿದೆ.
ಘಟಪ್ರಭೆಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾದ ಪರಿಣಾಮದಿಂದಾಗಿ ದೇಗುಲದ ಮುಂಭಾಗದ ಮೆಟ್ಟಿಲು, ಕಟ್ಟೆಯವರೆಗೆ ಎರಡು ಅಡಿಯಷ್ಟು ನೀರು ನಿಂತಿದೆ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದರೆ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದೆ.
ಹಿಡಕಲ್ ಜಲಾಶಯದ ನೀರಿನ ಮಟ್ಟ (ಒಳ ಹರಿವು) 17 ಸಾವಿರ ಕ್ಯೂಸೆಕ್ ಇದ್ದು, ಹೊರ ಹರಿವನ್ನು ನಿಲ್ಲಿಸಲಾಗಿದೆ. ಆದರೂ ಕೂಡ ಬರೀ ಮಳೆಯ ನೀರಿನಿಂದಲೇ ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿರುವುದು ನದಿ ದಡದ ಜನರಲ್ಲಿ ಆತಂಕ ಮೂಡಿಸಿದೆ.
ಹೊಳೆ ಬಸವೇಶ್ವರ ದೇವಸ್ಥಾನ ನದಿ ದಡದಲ್ಲೇ ಇರುವುದರಿಂದಾಗಿ ಘಟಪ್ರಭಾಗೆ ನೀರು ಹರಿವು ಹೆಚ್ಚಾಗುತ್ತಿದ್ದಂತೆ, ಪ್ರತೀ ವರ್ಷವೂ ಈ ದೇವಸ್ಥಾನ ಜಲದಿಗ್ಬಂಧನ ಎದುರಿಸುತ್ತಿದೆ.








