ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಅಯೋಧ್ಯಾ ಬಾರ್ ಕೌನ್ಸಿಲ್ ಒಂದು ಐತಿಹಾಸಿಕ ಮತ್ತು ಕಠಿಣ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಆರೋಪಿಗಳಿಗೆ ನಡುಕ ಹುಟ್ಟಿಸಿದೆ.
ದೇವಸ್ಥಾನದ ದ್ರೋಹಿಗಳ ಪರ ವಾದಿಸುವಂತಿಲ್ಲ
ಅಯೋಧ್ಯಾ ಹಾಗೂ ಫೈಜಾಬಾದ್ ಜಿಲ್ಲೆಯ ಯಾವುದೇ ವಕೀಲರು ಈ ಪ್ರಕರಣದ ಆರೋಪಿಗಳ ಪರವಾಗಿ ವಕಾಲತ್ತು ವಹಿಸಬಾರದು ಎಂದು ಬಾರ್ ಅಸೋಸಿಯೇಷನ್ ಆದೇಶಿಸಿದೆ. ಶ್ರೀರಾಮ ಎಂಬುದು ಕೇವಲ ಹೆಸರಲ್ಲ ಅದು ನಮ್ಮ ಅಸ್ಮಿತೆ. ಅಂತಹ ಪವಿತ್ರ ಮಂದಿರದ ಹಣದಲ್ಲಿ ಅಕ್ರಮ ಎಸಗಿದವರ ಪರವಾಗಿ ನಿಲ್ಲುವುದು ಅಕ್ಷಮ್ಯ ಅಪರಾಧ ಎಂದು ಸಂಘ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಸಂಘದ ಈ ಆದೇಶವನ್ನು ಮೀರಿ ಯಾರಾದರೂ ವಕೀಲರು ಆರೋಪಿಗಳ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರೆ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ನಾವು ಕೇವಲ ದೇವಸ್ಥಾನದ ಪರ
ಈ ಕುರಿತು ನಡೆದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿರುವ ಬಾರ್ ಕೌನ್ಸಿಲ್ ನಾವು ಕೇವಲ ದೇವಸ್ಥಾನದ ಪರವಾಗಿ ಮಾತ್ರ ನಿಲ್ಲುತ್ತೇವೆ ಮತ್ತು ನ್ಯಾಯಾಲಯದಲ್ಲಿ ದೇವಸ್ಥಾನದ ಹಿತಾಸಕ್ತಿಗಾಗಿ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದೆ. ಕೋಟ್ಯಂತರ ಭಕ್ತರ ನಂಬಿಕೆಗೆ ದ್ರೋಹ ಬಗೆದವರ ಪರವಾಗಿ ವಕಾಲತ್ತು ವಹಿಸುವುದು ನಮ್ಮ ವೃತ್ತಿ ಧರ್ಮಕ್ಕೆ ಮತ್ತು ಅಸ್ಮಿತೆಗೆ ವಿರುದ್ಧವಾದುದು ಎಂದು ವಕೀಲರ ಸಂಘ ಹೇಳಿದೆ.
ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಮತ್ತೊಂದೆಡೆ ರಾಮಮಂದಿರ ದೇಣಿಗೆ ಅಕ್ರಮದ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಶೀಲ್ ನಾಗು ಅವರ ನ್ಯಾಯಪೀಠವು ಈ ಪ್ರಕರಣದಲ್ಲಿ ಇಷ್ಟು ಆತುರದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸದ್ಯ ನ್ಯಾಯಾಲಯಕ್ಕೆ ರಜೆ ಇರುವುದರಿಂದ ರಜೆ ಮುಗಿದ ನಂತರವಷ್ಟೇ ಪ್ರಕರಣವನ್ನು ಪಟ್ಟಿ ಮಾಡಲಾಗುವುದು. ಮೊದಲು ಈ ಬಗ್ಗೆ ಪೊಲೀಸ್ ತನಿಖೆ ಪೂರ್ಣಗೊಳ್ಳಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಯೋಧ್ಯೆಯ ಈ ನಿರ್ಧಾರವು ಈಗ ಕಾನೂನು ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು ಭಕ್ತರ ಹಿತಾಸಕ್ತಿ ರಕ್ಷಣೆಗೆ ವಕೀಲರ ಸಂಘ ನಿಂತಿರುವುದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.







