ಟೀಂ ಇಂಡಿಯಾದಲ್ಲಿ ಹೊಸ ಯುಗ ಆರಂಭಿಸುತ್ತೇವೆ, ಸ್ಟಾರ್ ಸಂಸ್ಕೃತಿಗೆ ಮುಕ್ತಿ ಹಾಡುತ್ತೇವೆ ಎಂದು ಬೀಗುತ್ತಾ ಬಂದ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಂಡವನ್ನು ಕಟ್ಟುವ ಹೆಸರಿನಲ್ಲಿ ಹಿರಿಯ ಆಟಗಾರರನ್ನು ಮೂಲೆಗುಂಪು ಮಾಡಿ, ಕೇವಲ ತಮ್ಮ ಇಷ್ಟದ ಆಟಗಾರರಿಗೆ ಮಣೆ ಹಾಕಿದ ಫಲವಾಗಿ ಇಂದು ಭಾರತ ತಂಡ ಐರ್ಲೆಂಡ್ ಅಂತಹ ಕ್ರಿಕೆಟ್ ಶಿಶುಗಳ ಮುಂದೆ ಮಣಿದು ಜಾಗತಿಕ ಮಟ್ಟದಲ್ಲಿ ಅವಮಾನ ಅನುಭವಿಸುವಂತಾಗಿದೆ.
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ 0-2 ಅಂತರದ ವೈಟ್ ವಾಶ್ ಅನುಭವಿಸಿದ್ದು ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಕಪ್ಪು ಪುಟವಾಗಿ ದಾಖಲಾಗಿದೆ. ಒಂದೆಡೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ, ಇನ್ನೊಂದೆಡೆ ಐರ್ಲೆಂಡ್ ವಿರುದ್ಧ ಸೋಲುವ ದಯನೀಯ ಸ್ಥಿತಿ. ಈ ವೈಫಲ್ಯಕ್ಕೆ ಗಂಭೀರ್ ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಅಗರ್ಕರ್ ಅವರ ಅವೈಜ್ಞಾನಿಕ ಆಯ್ಕೆ ಪ್ರಕ್ರಿಯೆಯೇ ಕಾರಣ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ದ್ರಾವಿಡ್ ಕಾಲದ ವೈಭವ ಎಲ್ಲಿ ಹೋಯಿತು?
ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಭಾರತ ಏಕಕಾಲಕ್ಕೆ ಎರಡು ಬೇರೆ ಬೇರೆ ದೇಶಗಳಲ್ಲಿ ಎರಡು ಬಲಿಷ್ಠ ತಂಡಗಳನ್ನು ಕಣಕ್ಕಿಳಿಸುವಷ್ಟು ಪ್ರತಿಭಾವಂತರನ್ನು ಹೊಂದಿತ್ತು. ಆದರೆ ಇಂದು ಎ ದರ್ಜೆಯ ತಂಡಕ್ಕಿಂತಲೂ ಕಳಪೆಯಾಗಿ ಭಾರತ ಕಾಣುತ್ತಿದೆ. ತಂಡದಲ್ಲಿ ಆಕರ್ಷಕ ಆಟಗಾರರಿಲ್ಲ, ಪಂದ್ಯ ಗೆಲ್ಲಿಸುವ ಛಲವಿರುವ ಸೀನಿಯರ್ ಗಳಿಲ್ಲ. ಕೇವಲ ಐಪಿಎಲ್ ಪ್ರದರ್ಶನ ನೋಡಿ ತಂಡಕ್ಕೆ ಸೇರಿಸಿಕೊಂಡ ಆಟಗಾರರು ಅಂತರಾಷ್ಟ್ರೀಯ ಮಟ್ಟದ ಒತ್ತಡವನ್ನು ತಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ.
ನಾಯಕತ್ವದ ಗೊಂದಲ ಮತ್ತು ಪ್ರತಿಭೆಗಳ ನಿರ್ಲಕ್ಷ್ಯ
ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ರನ್ನು ಕಡೆಗಣಿಸಿ, ತಂಡದಲ್ಲೇ ಸ್ಥಾನ ಪಡೆಯಲು ಪರದಾಡುತ್ತಿದ್ದ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ನೀಡಿದ್ದು ಗಂಭೀರ್ ಅವರ ಹಠವೋ ಅಥವಾ ರಣತಂತ್ರವೋ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಯುವ ಆಟಗಾರ ವೈಭವ್ ಸೂರ್ಯವಂಶಿ ಅಂತಹ ಪ್ರತಿಭೆಗಳನ್ನು ಬೆಂಚ್ ಮೇಲೆ ಕೂರಿಸಿ, ಕೇವಲ ತಮ್ಮ ನೆಚ್ಚಿನ ಆಟಗಾರರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಕೆಟ್ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರಾ ಅಭಿಮಾನಿಗಳು?
ಸತತ ಸೋಲು ಮತ್ತು ತಂಡದ ಒಳಗಿನ ರಾಜಕೀಯದಿಂದಾಗಿ ಸಾಮಾನ್ಯ ಜನರು ಕ್ರಿಕೆಟ್ ನೋಡುವುದನ್ನೇ ಕಡಿಮೆ ಮಾಡುತ್ತಿದ್ದಾರೆ. ಮೈದಾನಕ್ಕೆ ಜನರನ್ನು ಸೆಳೆಯುವ ಕನಿಷ್ಠ ಆಕರ್ಷಣೆಯೂ ಈ ತಂಡದಲ್ಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಗಂಭೀರ್ ಮತ್ತು ಅಗರ್ಕರ್ ಜೋಡಿ ಇದೇ ರೀತಿ ತಮ್ಮ ಮೊಂಡುತನ ಮುಂದುವರಿಸಿದರೆ, ಭಾರತೀಯ ಕ್ರಿಕೆಟ್ ಮತ್ತಷ್ಟು ಪಾತಾಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ.







