ಭಾರತದ ಗಡಿಗೆ ಹೊಂದಿಕೊಂಡಿರುವ ನಗರಗಳಲ್ಲಿ ಬುಲೆಟ್ ರೈಲು ಸಂಚಾರ ಆರಂಭಿಸಿದ ಚೀನಾ
ಚೀನಾ : ಭಾರತದ ಗಡಿಗೆ ಹೊಂದಿಕೊಂಡಿರುವ ನಗರಗಳಲ್ಲಿ ಚೀನಾ ಬುಲೆಟ್ ರೈಲು ಸಂಚಾರ ಆರಂಭಿಸಿದೆ.. ಟೆಬೆಟ್ ಪ್ರಾಂತ್ಯದ ರಾಜಧಾನಿ ಲ್ಹಾಸಾದಿಂದ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ನೈಂಗಿಚಿಯೊ ನಗರವನ್ನು ಸಂಪರ್ಕಿಸುವ ಸಂಪೂರ್ಣ ವಿದ್ಯುದೀಕೃತ ಬುಲೆಟ್ ರೈಲು ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ. ಗಡಿ ಭಾಗದ ಸ್ಥಿರತೆಯನ್ನು ಕಾಪಾಡುವಲ್ಲಿ ಬುಲೆಟ್ ರೈಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಚೀನಾ ಭಾವಿಸಿದೆ.. ಜುಲೈ 1 ರಂದು ಚೀನಾದ ಕಮ್ಯೂನಿಸ್ಟ್ ಪಾರ್ಟಿ ಶತಮಾನೋತ್ಸವ ಆಚರಣೆಗೆ ಮುನ್ನವೇ ಈ ಮಹತ್ವದ ಯೋಜನೆಯನ್ನು ಚೀನಾ ಪೂರ್ಣಗೊಳಿಸಿದೆ.
ಟಿಬೆಟ್ ಪ್ರಾಂತ್ಯದಲ್ಲಿ ಮೊದಲು ಕ್ವಿಂಗ್ಹೈ-ಟಿಬೆಟ್ ರೈಲ್ವೆ ವಿಭಾಗ ಆಂಭವಾಯಿತು. ಸಿಚುವಾನ್-ಟಿಬೆಟ್ ರೈಲ್ವೆ ಎರಡನೇ ವಿಭಾಗವಾಗಿದೆ. ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡುವಿನಿಂದ ಸಿಚುವಾನ್ – ಟಿಬೆಟ್ ರೈಲ್ವೆ ವಿಭಾಗ ಆರಂಭವಾಗುತ್ತದೆ. ಈ ಮಾರ್ಗ ಯಾನ್ ಮೂಲಕ ಹಾದು ಹೋಗುತ್ತದೆ. ಕ್ವಾಮ್ಡೊ ಮೂಲಕ ಟಿಬೆಟ್ ತಲುಪುತ್ತದೆ. ಇದು ಚೆಂಗ್ಡು-ಲ್ಹಾಸಾ ನಡುವಿನ ಪ್ರಯಾಣದ ಅವಧಿಯನ್ನು 48 ಗಂಟಗಳಿಂದ 13 ಗಂಟೆಗಳಿಗೆ ಕಡಿತಗೊಳಿಸುವ ಮಾರ್ಗವಾಗಿದೆ. ಅಲ್ಲದೇ ಚೀನಾ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ನ ಭಾಗವೆಂದು ಹೇಳಿಕೊಂಡಿದೆ. ಆದ್ರೆ ಭಾರತ ಇದನ್ನ ಬಲವಾಗಿ ತಿರಸ್ಕರಿಸುತ್ತಲೇ ಬಂದಿದೆ.