`ಆನೆ’ಯಿಂದ ಇಳಿದು `ಕಮಲ ಹಿಡಿದ ಎನ್.ಮಹೇಶ್’
ಬೆಂಗಳೂರು : ಕೊಳ್ಳೆಗಾಲದ ಶಾಸಕ ಎನ್ ಮಹೇಶ್ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎನ್.ಮಹೇಶ್ ಅವರು ಕಮಲ ಹಿಡಿದರು.
ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಮಹೇಶ್ ಬಿಜೆಪಿಗೆ ಸೇರ್ಪಡೆಯಾದರು.
ಇದಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮಹೇಶ್ ಚಳುವಳಿಯ ಹಿನ್ನೆಲೆಯಿಂದ ಬಂದವರು. ಅವರ ಸಂಘಟನಾ ಶಕ್ತಿ ಬಹು ದೊಡ್ಡದು.
ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು. ಕೊಳ್ಳೆಗಾಲದ ಎಲ್ಲ ಜನಾಂಗ ಅವರನ್ನು ಆರಿಸಿದೆ. ನಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ಬಳಿಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಹೇಶ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಮಹೇಶ್ ಸೇರ್ಪಡೆಯಿಂದ ಎಲ್ಲರೂ ಪಕ್ಷಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ.
ಪರಿಶಿಷ್ಟರನ್ನ ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು, ಪಕ್ಷ ದಲಿತರ ಹಿಂದೆ ಇದೆ ಎನ್ನುವ ಸಂದೇಶ ಹೋಗಬೇಕು ಎಂದು ತಿಳಿಸಿದರು.









