ಶೀಘ್ರವೇ ಸಿಲಿಕಾನ್ ಸಿಟಿ ರಸ್ತೆಗೆ ಇಳಿಯಲಿದೆ ಎಲೆಕ್ಟ್ರಿಕ್ ಬಸ್..!
ಬೆಂಗಳೂರು : ಬಿಎಂಟಿಸಿ ಮಹತ್ವದ ಯೋಜನೆಯಾಗಿರುವ ಎಲೆಕ್ಟ್ರಿಕ್ ಬಸ್ಗಳ ಸಂಚಾರವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೆಪ್ಟೆಂಬರ್ನಲ್ಲಿ ಆರಂಭಿಸಲಿದೆ.. ಅಂದ್ರೆ ಸೆಪ್ಟೆಂಬರ್ ನಲ್ಲಿ ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳು ಸಂಚಾರ ಮಾಡಲಿವೆ…
ಕೋವಿಡ್ ಇರದೇ ಹೋಗಿದ್ರೆ ಇಷ್ಟೊತ್ತಿಗೆ ಯಾವಾಗಲೋ ಎಲೆಕ್ಟ್ರಿಕಲ್ ಬಸ್ ಗಳು ರಾಜ್ಯ ರಾಜಧಾನಿಯಲ್ಲಿ ಸಂಚಾರ ಆರಂಭಿಸಬೇಕಾಗಿತ್ತು.. ಆದ್ರೆ ಕೊರೊನಾ ಪ್ಲಾನ್ ಗಳನ್ನ ಫೇಲ್ ಮಾಡಿತ್ತು.. ಇದೀಗ ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸೆಪ್ಟೆಂಬರ್ ನಲ್ಲಿ ಕಾಲ ಕೂಡಿ ಬಂದಿದೆ..
ಬಿಎಂಟಿಸಿಗೆ ಎನ್ ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ (ಎನ್ವಿವಿಎನ್) ಮತ್ತು ಜೆಎಂಬಿ ಜಂಟಿಯಾಗಿ 9 ಮೀಟರ್ ಉದ್ದದ ಬಸ್ಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿವೆ. ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವ ಬಸ್ಗಳು ರಸ್ತೆಗೆ ಬರಲಿವೆ. ಬಿಎಂಟಿಸಿ ಅಧಿಕಾರಿಗಳು ದೆಹಲಿಗೆ ಹೋಗಿ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಟೆಂಡರ್ ಪಡೆದಂತೆ ಬಿಎಂಟಿಸಿಗೆ ಒಟ್ಟು 90 ಬಸ್ಗಳನ್ನು ಕಂಪನಿ ಪೂರೈಕೆ ಮಾಡಲಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಬಸ್ಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಕಂಪನಿ ಸಹ ಈ ಕುರಿತು ಭರವಸೆ ಕೊಟ್ಟಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ 90 ಬಸ್ಗಳನ್ನು ಗುತ್ತಿಗೆ ಮೇಲೆ ಪಡೆಯಲಾಗುತ್ತಿದೆ. ಯೋಜನೆಯಡಿ ಪ್ರತಿ ಬಸ್ಗೆ 50 ಲಕ್ಷದಂತೆ 45 ಕೋಟಿ ಮತ್ತು ಡಿಪೋಗಳಲ್ಲಿ ಚಾರ್ಜಿಂಗ್ ಘಟಕ ಸ್ಥಾಪನೆ ಮಾಡಲು 5 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ ನಮ್ಮ ಮೆಟ್ರೋಗೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಾತ್ರ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲಾಗುತ್ತದೆ. ಬಸ್ ಪೂರೈಕೆ ಮಾಡುವ ಕಂಪನಿಗೆ ಬಿಎಂಟಿಸಿ ಪ್ರತಿ ಕಿ. ಮೀ. ಗೆ 51.67 ರೂ. ದರವನ್ನು ಪಾವತಿ ಮಾಡಲಿದೆ.
ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ದರವೇ ಕಡಿಮೆ ಎನ್ನಲಾಗಿದೆ. ಸದ್ಯ ಒಪ್ಪಂದದಂತೆ ಬಸ್ಗಳನ್ನು ಪೂರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೇಮಿಸಲಿದೆ, ವೇತನ ನೀಡಲಿದೆ. ಬಸ್ ನಿರ್ವಹಣಾ ವೆಚ್ಚ, ವಿದ್ಯುತ್ ಶುಲ್ಕವನ್ನು ಭರಿಸಲಿದೆ. ಬಸ್ ನ ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಯಾಗಿರುತ್ತಾರೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ 2ನೇ ಹಂತದಲ್ಲಿ ಬಿಎಂಟಿಸಿ ಬಸ್ಗಳನ್ನು ಖರೀದಿ ಮಾಡಲಿದೆ.
ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯ ಫೇಮ್ ಇಂಡಿಯಾ-2 ಯೋಜನೆಯ ಅನ್ವಯ ಕರ್ನಾಟಕದಲ್ಲಿ 400 ಇ-ಬಸ್ ಓಡಿಸಲು ಒಪ್ಪಿಗೆ ನೀಡಿದೆ. ಇದರಲ್ಲಿ 300 ಬಸ್ ಬೆಂಗಳೂರು ನಗರಕ್ಕೆ ಸಿಕ್ಕಿದೆ. ಗುತ್ತಿಗೆ ಆಧಾರದಲ್ಲಿ ಬಸ್ ಪಡೆದು ಓಡಿಸಲು ಕೇಂದ್ರ ಸಹಾಯಧನವನ್ನು ನೀಡಲಿದೆ.