ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ – ಮಳೆಗಾಗಿ ಬಾಲಕಿಯರಿಂದ ಬೆತ್ತಲೆ ಮೆರವಣಿಗೆ
ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಆಗಾಗ ಮಹಿಳೆಯರನ್ನ ಊರ ಎದುರು ಅವಮಾನಗೊಳಿಸಿದಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಇದೀಗ ಬರಗಾಲದತಂಹ ಪರಿಸ್ಥಿತಿ ಎದುರಾಗಿರೋದ್ರಿಂದ ಬಾಲಕಿಯರನ್ನ ಬೆತ್ತಲೆ ಮೆರವಣಿಗೆ ಮಾಡಿಸಲಾಗಿದೆ. ಮಳೆಗಾಗಿ ಪ್ರಾರ್ಥನೆ ನಡೆಸಿದ ಗ್ರಾಮಸ್ಥರು ಧಾರ್ಮಿಕ ಆಚರಣೆ ಹೆಸರಲ್ಲಿ ಸುಮಾರು 6 ಬಾಲಕಿಯರನ್ನು ಸಂಪೂರ್ಣವಾಗಿ ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿಸಿದ್ದಾರೆ. ಇಂತಹ ಅಮಾನವೀಯ ಘಟತೆ ನಡೆದಿರೋದು ದಮೋಹ್ ಜಿಲ್ಲೆಯಲ್ಲಿ. ಬಾಲಕಿಯರು ನಗ್ನವಾಗಿ ತಮ್ಮ ಹೆಗಲ ಮೇಲೆ ಕಪ್ಪೆಗಳನ್ನು ಕಟ್ಟಿದ ಮರದ ಬಾಣವನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿದರೆ ಮಳೆ ಬರುತ್ತದೆ ಎಂಬ ಧಾರ್ಮಿಕ ನಂಬಿಕೆ ಇಲ್ಲಿನ ಜನತೆಯಲ್ಲಿದೆ. ಇವರ ಜತೆಗೆ ಸಾಗುವ ಮಹಿಳೆಯರು ವರುಣನ ಗುಣಗಾನ ಮಾಡುತ್ತಾ ಭಜನೆಗಳನ್ನು ಹಾಡುತ್ತಾರೆ.
ಈ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ದಮೋಹ್ ಜಿಲ್ಲಾಡಳಿತದಿಂದ ವರದಿ ಕೇಳಿದೆ. ಬುಂಡೇಲ್‌ಖಂಡ ಪ್ರದೇಶದ ದಮೋಹ್ ಜಿಲ್ಲಾ ಕೇಂದ್ರದಿಂದ 50 ಕಿಲೋಮೀಟರ್ ದೂರದ ಬನಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಎನ್‌ಸಿಪಿಸಿಆರ್‌ಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೂ ಬಲವಂತವಾಗಿ ಬಾಲಕಿಯರನ್ನು ನಗ್ನಗೊಳಿಸಿದ್ದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಆಚರಣೆಯಿಂದ ಮಳೆ ಬರುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.