ದುಷ್ಟ ಶಕ್ತಿಗಳನ್ನ ಹಿಮ್ಮೆಟ್ಟಿಸುವ ಸಲುವಾಗಿ ಬರೆಯಲಾಗುವ ‘ನಾಳೆ ಬಾ’ ಹಿಂದಿನ ಕಥೆಯೇನು..? ಮೊದಲಿಗೆ ಶುರುವಾಗಿದ್ದು ಎಲ್ಲಿ..?
ಭಾರತವು ಅನೇಕ ವಿಚಿತ್ರ ರೀತಿಯ ನಂಬಿಕೆಗಳ ತವರೂರು. ಈ ದೇಶದ ಪ್ರತೀ ಪ್ರಾಂತ್ಯಗಳಲ್ಲು ಒಂದಿಲ್ಲೊಂದು ವಿಚಿತ್ರ ತರದ ನಂಬಿಕೆಗಳು ಹಾಸು ಹೊಕ್ಕಾಗಿವೆ. ಅಂಥಹ ನಂಬಿಕೆಗಳಲ್ಲಿ ಕಳೆದ ಮೂರು ದಶಕಗಳಿಂದ ಪ್ರಸಿದ್ಧಿ ಪಡೆದಿರುವ ‘ನಾಳೆ ಬಾ’ ಎಂಬ ಬಾಗಿಲು ಮತ್ತು ಗೋಡೆ ಬರಹದ ನಂಬಿಕೆಯೂ ಸಹ ಒಂದು!
ಹಲವರ ಮನೆಯ ಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆದಿರುವುದನ್ನ ನಾವು ನೀವು ಗಮನಿಸಿರುತ್ತೇವೆ. ಯಾಕೆ ಹೀಗೆ ಬರೆದಿರುತ್ತಾರೆ ? ಎಂಬ ಪ್ರಶ್ನೆಗುತ್ತರವಾಗಿ ಮನೆಗೆ ಬರುವ ದುಷ್ಟ ಶಕ್ತಿಗಳನ್ನ ಹಿಮ್ಮೆಟ್ಟಿಸುವ ಸಲುವಾಗಿ ಹೀಗೆ ಬರೆಯಲಾಗುತ್ತದೆ ಎಂದು ನಮ್ಮ ಹಿರಿಯರು ನಮಗೆ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು. ಈ ‘ನಾಳೆ ಬಾ’ ಎಂಬ ಪರಂಪರೆ 1990 ರ ದಶಕದಲ್ಲಿ ಬೆಂಗಳೂರಿನ ಕೆಲವು ಜನಭರಿತ ಏರಿಯಾಗಳಲ್ಲಿ ಶುರುವಾಯ್ತು. ಬೆಂಗಳೂರಿನ ಅಂದಿನ ಇಂದಿರಾನಗರ, ಮಲ್ಲೇಶ್ವರಂ ಹಾಗೂ ರಾಜಾಜಿನಗರಗಳ ಕೆಲವಾರು ಮನೆಗಳ ಮೇಲೆ ಹೀಗೆ ಬರೆಯಲಾದ ಬೋರ್ಡ್ ಗಳು ಮೊಟ್ಟ ಮೊದಲು ಕಾಣಿಸಿಕೊಂಡವು.
ಇದು ತೊಂಭತ್ತರ ದಶಕದಲ್ಲಿ ಜನಪ್ರಿಯವಾಯ್ತಾದರೂ 60-70 ರ ದಶಕದಲ್ಲೇ ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಈ ‘ನಾಳೆ ಬಾ’ ನಂಬಿಕೆಯು ಚಾಲ್ತಿಯಲ್ಲಿದ್ದುದರ ಬಗ್ಗೆ ಕೆಲ ಹಿರಿಯರು ಅಭಿಪ್ರಾಯ ಪಡುತ್ತಾರೆ. ಈ ‘ನಾಳೆ ಬಾ’ ನಂಬಿಕೆಯ ಹಿಂದಿರುವ ಹಿನ್ನೆಲೆ ಭಯಖಚಿತವಾದ ಒಂದು ಸಿದ್ಧಾಂತವನ್ನ ಹೊಂದಿದೆ. ಪ್ರೇತ, ಭೂತ ಪಿಶಾಚಿಗಳ ಪ್ರವೇಶವನ್ನ ತಡೆಯುವ ಸಲುವಾಗಿ ಈ ಕ್ರಮವನ್ನ ಅನುಸರಿಸಲು ಪ್ರಾರಂಭಿಸಿದರಾದರೂ ಇದರ ಹಿಂದಿರುವ ಕೆಲ ಕತೆಗಳು ಎದೆ ಕಂಪಿಸುವಂತೆ ಮಾಡುತ್ತವೆ.
ಜನಜನಿತವಾದ ಕತೆಯೊಂದರ ಪ್ರಕಾರ ಬೆಂಗಳೂರಿನ ಗ್ರಾಮಾಂತರ ಭಾಗದ ನಿವಾಸಿಯಾದ ಓರ್ವ ಮುದುಕಿಯ ಜಮೀನನ್ನು ಬಹಳ ಹಿಂದೆ ಒಬ್ಬ ದುರಾಸೆಯ ಸಿರಿವಂತ ಲಪಟಾಯಿಸಿ ಆಕೆಗೆ ವಂಚಿಸಿದ್ದ. ಆ ಜಾಗ ಪಡೆದ ಆತನನ್ನ ಬಲಿ ತೆಗೆದುಕೊಂಡ ಆಕೆಯ ಪ್ರೇತವು ಅಲ್ಲಿಗೆ ಬರುವವರಿಗು ತೊಂದರೆ ಕೊಡಲಾರಂಭಿಸಿತು. ಅಲ್ಲಿಗೆ ಬರುವ ಅಥವಾ ಆ ಜಾಗದ ಮೇಲೆ ಹಾದು ಹೋಗುವ ಯಾರೇ ಆಗಲಿ ‘ನಾಳೆ ಬಾ’ ಎಂದರೆ ಮಾತ್ರವೇ ಅವರಿಗೆ ಉಳಿಗಾಲ. ಇಲ್ಲದಿದ್ದರೆ ಅವರಿಗೆ ಆ ಮುದುಕಿಯ ಪ್ರೇತದ ಕಾಟ ತಪ್ಪದು ಎಂಬ ನಂಬಿಕೆ ಹಳೆ ಬೆಂಗಳೂರಿನಲ್ಲಿ ಬಹಳ ಕಾಲದಿಂದಲು ಚಾಲ್ತಿಯಲ್ಲಿದೆ. ಈ ಘಟನೆ ಖಚಿತವಾಗಿ ನಡೆದ ಬಗ್ಗೆ ಯಾವ ಪುರಾವೆಯೂ ಇಲ್ಲವಾದರೂ ಈ ಕತೆ ಹಲವರ ಬಾಯಲ್ಲಿ ಹರಿದಾಡುತ್ತಿದೆ.
ಇನ್ನೊಂದು ಕತೆಯ ಪ್ರಕಾರ ಓರ್ವ ಮದುವೆ ಹೆಣ್ಣು ಕಾರಣಾಂತರಗಳಿಂದ ಮದುವೆಗೆ ಮುನ್ನವೇ ಸತ್ತು ಹೋಗಿ ಆಕೆಯ ಪ್ರೇತವು ಮನೆ ಮನೆಗೆ ರಾತ್ರಿ ವೇಳೆ ಸಂಚರಿಸಿ ಅವಿವಾಹಿತ ಪುರುಷರನ್ನೇ ಗುರಿ ಮಾಡಿ ಅಲೆಯುತ್ತದೆಯೆಂದೂ, ಇದು ಪ್ರತೀ ಮನೆಗು ಭೇಟಿ ಕೊಟ್ಟು ಬಾಗಿಲು ಬಡಿದು ಆ ಮನೆಯ ಸಂಬಂಧಿಗಳ ಹಾಗೆ ಧ್ವನಿ ಅನುಕರಿಸಿ ಮನೆಯವರಿಗೆ ಕೇಡು ತರುತ್ತದೆ ಎಂದೂ ನಂಬಿಕೆಯಿದೆ. ಇಂಥ ಭಯಾನಕ ಅನುಭವಕ್ಕು ಒಳಗಾದವರಿದ್ದಾರೆ ! ನಾಳೆ ಬಾ ಎಂಬ ಬರಹವನ್ನ ಓದಿದ ಈ ಪ್ರೇತವು ಪುನಃ ಅಲ್ಲಿಗೆ ಭೇಟಿ ಕೊಡುವುದಿಲ್ಲ ಎಂದೂ ನಂಬುತ್ತಾರೆ.
ಈ ಪ್ರೇತವನ್ನ ಸಾಮಾನ್ಯವಾಗಿ ‘ಕೂಗು ಮಾರಿ’ ಎಂದೆ ಕರೆಯಲಾಗುತ್ತದೆ. ಕೆಲವೆಡೆ ‘ರಾತ್ರಿ ಮೋಹಿನಿ’ ಎಂದೂ ಸಹ ಕರೆಯುತ್ತಾರೆ. ನಮ್ಮ ಕೆಲವು ಗ್ರಾಮೀಣ ಭಾಗದಲ್ಲಿ ಮನೆಗಳ ಮೇಲೆ ‘ಕೂಗುಮಾರಿ ನಾಳೆ ಬಾ’ ಎನ್ನುವ ಬರಹ ನಿಮ್ಮ ಕಣ್ಣಿಗೆ ಇಂದಿಗೂ ಬೀಳಬಹುದು. ಬೆಂಗಳೂರಿನ ಎಷ್ಟೋ ಜನ ಹೀಗೆ ರಾತ್ರಿಯ ವೇಳೆ ಸತ್ತುಹೋದ ತಮ್ಮ ಸಂಬಂಧಿಗಳ ಹಾಗೆಯೇ ರಾತ್ರಿ ವೇಳೆ ಧ್ವನಿ ಅನುಕರಿಸಿ ಯಾರೊ ಬಾಗಿಲು ಬಡಿದ ಸದ್ದಾಯ್ತೆಂದೂ, ‘ನಾಳೆ ಬಾ’ ಎಂದು ಬರೆದ ಮೇಲೆ ಈ ಸದ್ದು ನಿಂತಿತೆಂದೂ ತಮ್ಮ ಅನುಭವವನ್ನ ಹೇಳಿಕೊಂಡಿದ್ದಾರೆ.
ತೊಂಭತ್ತರ ದಶಕದಲ್ಲಿ ಪ್ಲೇಗ್ ರೋಗಕ್ಕೆ ಬೆಂಗಳೂರಿನ ಹಲವು ಜನ ತುತ್ತಾದಾಗ ಆ ರೋಗದ ಮಾರಿಯ ವಿರುದ್ಧ ಹೀಗೆ ಬರೆಯಲಾಯ್ತೆಂದೂ ಆದರೆ ಕ್ರಮೇಣ ಇದು ಭೂತ, ಪ್ರೇತ, ಪಿಶಾಚಿಗಳ ಅಂತೆ ಕಂತೆಯ ಕತೆಯಾಗಿ ಬದಲಾಯ್ತೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.
ಇದು ಸಿಟಿ ಕತೆಯಾದರೆ, ಕರ್ನಾಟಕದ ಬಯಲುಸೀಮೆಯ ಹಳ್ಳಿಗಳಲ್ಲು ಸಹ ಈ ‘ನಾಳೆ ಬಾ’ ವಿಶಿಷ್ಟ ಸ್ಥಾನ ಪಡೆದ ನಂಬಿಕೆಯಾಗಿದೆ. ಹುಣಸೆ ಮರದ ತೋಪುಗಳಲ್ಲಿ ವಾಸವಿರುವ ಅಥವಾ ಕಾಣಿಸುವ ಭೂತಗಳ ಬಗ್ಗೆ ಈ ಭಾಗದ ಅನೇಕರು ನಂಬಿಕೆ ಇಡುತ್ತಾರೆ. ಇವುಗಳು ರಾತ್ರಿ ವೇಳೆ ಸಂಚರಿಸುತ್ತಾ ಮನೆಗಳ ಮುಂದೆ ಅಲೆಯುತ್ತವೆಂದೂ, ಸಾವು ಸಂಭವಿಸಿದ ಮನೆಗಳಲ್ಲಿ ರಾತ್ರಿ ವೇಳೆ ಸತ್ತವರ ಧ್ವನಿಯು ಕೇಳಿ ಬರುತ್ತದೆಂದೂ ಅದರ ನಿಯಂತ್ರಣಕ್ಕಾಗಿ ‘ನಾಳೆ ಬಾ’ ಎಂದು ಬರೆಯುವ ಪರಿಪಾಠ ಈ ಭಾಗಗಳಲ್ಲಿ ರೂಢಿಗೆ ಬಂದಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲು ಸಹ ಇಂಥವೆ ಅಸಹಜ ನಂಬುಗೆಗಳು, ಕತೆಗಳು ಜಾರಿಯಲ್ಲಿವೆ. ಒಟ್ಟಾರೆ ಈ ‘ನಾಳೆ ಬಾ’ ಎನ್ನುವುದು ಕರ್ನಾಟಕದ ಭಯಾನಕ ನಂಬಿಕೆಗಳಲ್ಲಿ ಇಂದಿಗು ಸಹ ಅಗ್ರಸ್ಥಾನ ಪಡೆದಿದೆ.
ಮಾಹಿತಿ ಸಂಗ್ರಹ ಮತ್ತು ಲೇಖನ : ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)