ಚಾಮರಾಜನಗರ : ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ. ಹೀಗಾಗಿ ವಾರಕ್ಕೊಮ್ಮೆಯಾದ್ರೂ ಮದ್ಯದಂಗಡಿ ತೆರೆಯಿರಿ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೆಡೆ ಮಹಿಳೆಯರೇ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಎದುರಾಗಲಿದ್ದು, ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಇನ್ನು ಮದ್ಯದಂಗಡಿ ಮುಚ್ಚಿರುವುದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಖೋತಾ ಆಗುತ್ತಿದೆ. ಅಲ್ಲದೆ ಮದ್ಯ ಮಾರಾಟದ ಕಳ್ಳದಂಧೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಮದ್ಯದಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಳಸಂತೆಯಲ್ಲಿ ಲೋಕಲ್ ಮದ್ಯಕ್ಕೂ 500, 600 ರೂಪಾಯಿಗಳಾಗಿದೆ. ಮದ್ಯದಂಗಡಿಗಳನ್ನು ಬಂದ್ ಮಾಡಿದ್ದ ಮೇಲೆ ಕಾಳಸಂತೆಯಲ್ಲಿ ಹೇಗೆ ದೊರೆಯುತ್ತಿದೆ ಎಂದು ಪ್ರಶ್ನಿಸಿದ ಪುಟ್ಟರಂಗಶೆಟ್ಟಿ, ಬಂದ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ? ನಿಯಮಾನುಸಾರ ಸೀಲ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.








