ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ : `ಸಾಹಸ ಸಿಂಹ’ ಅಜರಾಮರ
ಸೆಪ್ಟೆಂಬರ್ 18… ಇದು ಸಾಹಸ ಸಿಂಹ, ಡಾ ವಿಷ್ಣುವರ್ಧನ್ ಅವರ ಅಭಿಮಾನಿಗಳು ಎಂದೂ ಮರೆಯದ ದಿನ. ಕಾರಣ ಇಂದು ಚಂದನವನದ ಯಜಮಾನ ವಿಷ್ಣುದಾದಾರ ಜನ್ಮದಿನ.
ಹೀಗಾಗಿ ಅವರ ಅಭಿಮಾನಿಗಳು ಪ್ರತಿವರ್ಷದಂತೆ ದಾದಾ ಜನ್ಮದಿನವನ್ನ ಅತ್ಯಂತ ಪ್ರೀತಿಯಿಂದ ಆಚರಣೆ ಮಾಡುತ್ತಿದ್ದಾರೆ.
ಕೆಲ ಅಭಿಮಾನಿ ಸಂಘಗಳು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಕೆಲವೆಡೆ ಅನ್ನದಾನಮ ರಕ್ತದಾನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅವರನ್ನು ಗಣ್ಯರು ಹಾಗೂ ತಾರೆಯರು ಕೂಡ ಸ್ಮರಿಸಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು.
ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಇನ್ನು ನಟ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ… ಅವರಿಗೆ ಸಾಗರದಷ್ಟು ಅಭಿಮಾನಿಗಳಿದ್ದಾರೆ. ಆ ಸಾಗರದಲ್ಲಿ ನಾನು ಕೇವಲ ಒಂದು ಗುಳ್ಳೆ. ನಿಮ್ಮನ್ನು ಇಂದು ಮಾತ್ರವಲ್ಲ, ಪ್ರತಿ ದಿನ, ಪ್ರತಿ ಸೆಕೆಂಡ್ ನೆನಪಿಸಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಸೆಪ್ಟೆಂಬರ್ 18, 1950 ಮೈಸೂರಿನಲ್ಲಿ ಜನಿಸಿದ ಡಾ.ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ವಂಶವೃಕ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಆದ್ರೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್ ಅವರಿಗೆ ದೊಡ್ಡ ಬ್ರೇಕ್ ನೀಡ್ತು.
ಭೂತಯ್ಯನ ಮಗ ಅಯ್ಯು, ಸಾಹಸ ಸಿಂಹ, ಬಂಧನ, ಯಜಮಾನ, ಸಿಂಹಾದ್ರಿಯ ಸಿಂಹ, ಯಜಮಾನ, ಆಪ್ತಮಿತ್ರ, ಆಪ್ತರಕ್ಷಕ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಡಾ.ವಿಷ್ಣುವರ್ಧನ್ ನೀಡಿದರು.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಡಾ.ವಿಷ್ಣುವರ್ಧನ್‍ಗೆ ರಾಜ್ಯ ಪ್ರಶಸ್ತಿ, ಡಾ.ರಾಜ್‍ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.









