ಬೆಂಗಳೂರು vs ಕೋಲ್ಕತ್ತಾ : ಕಪ್ ನಮ್ದೆ ಅಭಿಯಾನಕ್ಕೆ ಚಾಲನೆ
ಐಪಿಎಲ್ ನಲ್ಲಿ ಇಂದಿನಿಂದ ರಾಯಲ್ ಚಾಲೆಂಜರ್ಸ್ ಅಭಿಯಾನ ಆರಂಭವಾಗಲಿದೆ. ಕೊಹ್ಲಿ ಹುಡುಗರು ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದ್ದಾರೆ.
ಐಪಿಎಲ್ ಸೀಸನ್ 14ರಲ್ಲಿ ಈ ಎರಡೂ ತಂಡಗಳ ಲೆಕ್ಕಾಚಾರ ವಿಭಿನ್ನವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯ ಆಡಿ 5 ಪಂದ್ಯ ಗೆದ್ದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ 7 ಪಂದ್ಯ ಆಡಿದೆ. ಆದರೆ ಗೆದ್ದಿರೋದು ಎರಡೇ ಎರಡು ಮ್ಯಾಚ್. ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಆರ್ಸಿಬಿ ಉಳಿದಿರುವ 7 ಪಂದ್ಯಗಳಲ್ಲಿ ಕನಿಷ್ಠ 3ನ್ನು ಗೆದ್ದರೂ ಅಂತಿಮ ನಾಲ್ಕರ ಘಟ್ಟ ತಲುಪಬಹುದು. ಆದರೆ ಕೆಕೆಆರ್ ಉಳಿದಿರುವ 7 ಪಂದ್ಯಗಳಲ್ಲಿ ಕನಿಷ್ಠ ಐದನ್ನಾದರೂ ಗೆದ್ದು ರನ್ ರೇಟ್ ಮೇಲೂ ಕಣ್ಣಿಡಬೇಕು. ಹೀಗಾಗಿ ಅಬುದಾಭಿಯ ಶೇಖ್ ಜಹೀದ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಕುತೂಹಲ ಕೆರಳಿಸಿದೆ.
ಭಾರತದಲ್ಲಿ ಸತತ 4 ಪಂದ್ಯಗಳನ್ನು ಗೆದ್ದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತ್ತು. ನಂತರ ಎರಡು ಪಂದ್ಯ ಸೋತರೂ ಮತ್ತೊಂದು ಪಂದ್ಯ ಗೆದ್ದು ಕಮ್ ಬ್ಯಾಕ್ ಮಾಡಿತ್ತು. ಆದರೆ ಈ ಬಾರಿ ಆರಂಭದಲ್ಲೇ ಗೆದ್ದರೆ ಒತ್ತಡ ಕಡಿಮೆ ಆಗುತ್ತದೆ.
ಆರ್ಸಿಬಿ ಟೀಮ್ ಕಾಂಬಿನೇಷನ್ ಕೂಡ ಸಾಕಷ್ಟು ಬದಲಾಗುವ ಲಕ್ಷಣವಿದೆ. ವಾಷಿಂಗ್ಟನ್ ಸುಂದರ್ ಅಲಭ್ಯರಾಗಿದ್ದಾರೆ. ಹೀಗಾಗಿ ವಿದೇಶಿ ಆಟಗಾರರ ಕಾಂಬಿನೇಷನ್ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇದೆ. ಟಿಮ್ ಡೇವಿಡ್ ಮತ್ತು ವಹಿಂಡು ಹಸರಂಗ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಎಬಿಡಿ ವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ವಿದೇಶಿ ಕೋಟಾವನ್ನು ಪೂರ್ಣಗೊಳಿಸುತ್ತಾರೆ.
ಕಿಂಗ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಆರಂಭದಲ್ಲೇ ಕಣಕ್ಕಿಳಿಯುವುದು ಅನಿವಾರ್ಯ. 3ನೇ ಕ್ರಮಾಂಕದಲ್ಲಿ ಆಡುವ ಆಟಗಾರನಿಗಾಗಿ ಆರ್ಸಿಬಿ ಹುಡುಕಾಡುತ್ತಿದೆ. ಮೊಹಮ್ಮದ್ ಅಜರುದ್ದೀನ್ ಮತ್ತು ರಜತ್ ಪಾಟಿದಾರ್ ನಡುವೆ ಟಾಸ್ ನಡೆಯುತ್ತಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಮಧ್ಯಮ ಕ್ರಮಾಂಕವನ್ನು ಗಟ್ಟಿ ಮಾಡುತ್ತಾರೆ. ಶಹಬಾಸ್ ಅಹ್ಮದ್, ಶ್ರೀಕರ್ ಭರತ್ ಮತ್ತು ಸಚಿನ್ ಬೇಬಿ ನಡುವೆ ಮತ್ತೊಂದು ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ. ಕೈಲ್ ಜೇಮಿಸನ್ ಮತ್ತು ವನಿಂಡು ಹಸರಂಗ ಆಲ್ರೌಂಡರ್ ಕೋಟಾ ಭರ್ತಿ ಮಾಡಬಲ್ಲರು. ಹರ್ಷಲ್ ಪಟೇಲ್, ಮೊಹಮ್ಮದ್ ಸೀರಜ್ ಮತ್ತು ಯಜುವೇಂದ್ರ ಚಹಲ್ ಬೌಲರ್ಗಳ ಕೋಟಾದಲ್ಲಿ ಆಡೋದು ಖಚಿತ.
ಕೊಲ್ಕತ್ತಾ ತಂಡಕ್ಕೆ ಕೂಡ ಪ್ಯಾಟ್ ಕಮಿನ್ಸ್ ಸೇವೆ ಲಭ್ಯವಿಲ್ಲ. ಫಾರಿನ್ ಕೋಟಾದ ಆಟಗಾರನಿಗೆ ಹುಡುಕಾಟ ನಡೆಯುತ್ತಿದೆ. ಇಯಾನ್ ಮೊರ್ಗಾನ್, ಆಂಡ್ರೆ ರಸೆಲ್ ಮತ್ತು ಸುನೀಲ್ ನರೇನ್ ಆಡೋದು ಖಚಿತ. ಶಕಿಬ್ ಅಲ್ ಹಸನ್ ಮತ್ತು ಟಿಮ್ ಸೌಥಿ ನಡುವೆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ.
ನಿತಿಶ್ ರಾಣಾ ಮತ್ತು ಶುಬ್ಮನ್ ಗಿಲ್ ಆರಂಭಿಕ ಆಟಗಾರನಾದರೆ, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಧಾರ ಸ್ತಂಭಗಳು. ಆಂಡ್ರೆ ರಸೆಲ್, ಸುನೀಲ್ ನರೈನ್ ಆಲ್ ರೌಂಡರ್ಗಳು. ನಾಗರ್ ಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ ಮತ್ತು ಪ್ರಸಿಧ್ ಕೃಷ್ಣ ಬೌಲಿಂಗ್ ಬಲ.
ಅಬುಧಾನಿ ಶೇಖ್ ಝಹೀದ್ ಸ್ಟೇಡಿಯಂ ಕೊಂಚ ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್. ಹೀಗಾಗಿ ಇಲ್ಲಿ ದೊಡ್ಡ ಮೊತ್ತ ದಾಖಲಾಗುವುದು ಡೌಟ್. ಆದರೆ ಈ ಪಿಚ್ ನಲ್ಲಿ ನಡೆಯುವ ಮೊದಲ ಪಂದ್ಯ ಇದಾಗಿರುವುದರಿಂದ ರನ್ ಮಳೆ ನಿರೀಕ್ಷೆ ಮಾಡಬಹುದು.









