ಲಿಂಗಾಯಿತ ನಾಯಕರಿಗೂ ಕಾಂಗ್ರೆಸ್ ಅನ್ಯಾಯ : ಬಿಜೆಪಿ
ಬೆಂಗಳೂರು : ಟ್ವಿಟ್ಟರ್ ನಲ್ಲಿ ಬಿಜೆಪಿ – ಕಾಂಗ್ರೆಸ್ ಪಕ್ಷಗಳ ಕಿತ್ತಾಟ ಮುಂದುವರೆದಿದೆ.
ಕಾಂಗ್ರೆಸ್ ಸಭೆ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದು, ವೀರಶೈವ ಲಿಂಗಾಯತರನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಯತ್ನಿಸಿದ್ದ ಕಾಂಗ್ರೆಸ್ ಪಕ್ಷ ಈಗ ಜಾತಿಯ ಹೆಸರಿನಲ್ಲಿ ಸಭೆ ಮಾಡುತ್ತಿದೆ ಎಂದು ಕುಟುಕಿದೆ.
ಬಿಜೆಪಿ ಟ್ವಿಟ್ಟರ್ ನಲ್ಲಿ.. ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಿದೆ ಎಂದು ಸ್ವಪಕ್ಷದ ನಾಯಕರೇ ಆರೋಪಿಸುತ್ತಿದ್ದಾರೆ.
ವೀರೇಂದ್ರ ಪಾಟೀಲ್ ಅವರನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಪದಚ್ಯುತಿಗೊಳಿಸಿತ್ತು.
ವೀರಶೈವ – ಲಿಂಗಾಯಿತ ಸಮುದಾಯಕ್ಕೆ ಕಾಂಗ್ರೆಸ್ ನಾಯಕರು ಮಾಡಿದ ಅತಿದೊಡ್ಡ ಅವಮಾನ ಇದಾಗಿತ್ತು.
ಈಗ ಎರಡನೇ ಹಂತದಲ್ಲಿ ಬೆಳೆಯುತ್ತಿರುವ ರಾಜಕೀಯ ಕುಡಿಗಳಿಗೂ ಕಾಂಗ್ರೆಸ್ ಪಕ್ಷ ಅನ್ಯಾಯವೆಸಗುತ್ತಿದೆ.
ವೀರಶೈವ – ಲಿಂಗಾಯಿತರ ವಿಭಜನೆ ಹಾಗೂ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುನ್ನುಡಿ ಬರೆದ ಕಾಂಗ್ರೆಸ್ ಪಕ್ಷ ರಾಜ್ಯದ ಪ್ರಬಲ ಸಮುದಾಯವೊಂದರ ಭಾವನೆಗೆ ಘಾಸಿ ಮಾಡಿತು.
ಈ ಐತಿಹಾಸಿಕ ಪ್ರಮಾದದ ಜತೆಗೆ ಈಗ ತಮ್ಮ ಪಕ್ಷದ ಲಿಂಗಾಯಿತ ನಾಯಕರಿಗೂ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.









