ಬೆಂಗಳೂರು: ವಿಶ್ವದಾದ್ಯಂತ ಭಾರತದ ಅತಿ ದೊಡ್ಡ ಡಿಜಿಟಲ್ ಕ್ರಾಂತಿ ಎಂದು ಬಿಂಬಿತವಾಗಿರುವ ಯುಪಿಐ ವ್ಯವಸ್ಥೆಯನ್ನು ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳ ಆದಾಯದ ಮೂಲವನ್ನಾಗಿ ಪರಿವರ್ತಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಆರೋಪಿಸಿದ್ದಾರೆ. ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಹೆಸರಿನಲ್ಲಿ ಜಾರಿಗೆ ತಂದ ವ್ಯವಸ್ಥೆಯ ಮೇಲೆ ಈಗ ಶುಲ್ಕ ಹೇರುತ್ತಿರುವುದು ಸಾಮಾನ್ಯ ಜನರ ಮೇಲೆ ಪರೋಕ್ಷವಾಗಿ ಹೊರೆ ನೀಡುವ ತಂತ್ರ ಎಂದು ಅವರು ಕಿಡಿಕಾರಿದ್ದಾರೆ.
ಯುಪಿಐ ವಹಿವಾಟು ಯಶಸ್ವಿಯಾಗಲು ಶೂನ್ಯ ಶುಲ್ಕ ವ್ಯವಸ್ಥೆಯೇ ಪ್ರಮುಖ ಕಾರಣವಾಗಿತ್ತು. ಆದರೆ ಈಗ 2 ಸಾವಿರ ರೂಪಾಯಿಗಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೆ ಶೇಕಡಾ 0.4 ರಷ್ಟು ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಇದು ಮೇಲ್ನೋಟಕ್ಕೆ ಗ್ರಾಹಕರಿಗೆ ಹೊರೆಯಲ್ಲ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ವ್ಯಾಪಾರಿಗಳು ಈ ಹೊರೆಯನ್ನು ಭರಿಸಲಾಗದೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಾರೆ. ಅಂತಿಮವಾಗಿ ಇದರ ಪೆಟ್ಟು ಬೀಳುವವದು ಸಾಮಾನ್ಯ ಗ್ರಾಹಕನಿಗೇ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ನಗದು ವ್ಯವಹಾರಕ್ಕೆ ಮರಳುವ ಅಪಾಯ
ಸರ್ಕಾರದ ಈ ನಿರ್ಧಾರದಿಂದಾಗಿ ಡಿಜಿಟಲ್ ಇಂಡಿಯಾ ಮಾದರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವ್ಯಾಪಾರಿಗಳು ಈ ಶುಲ್ಕದಿಂದ ತಪ್ಪಿಸಿಕೊಳ್ಳಲು ಮತ್ತೆ ನಗದು ವ್ಯವಹಾರದತ್ತ ಸಾಗಬಹುದು. ಕೇಂದ್ರ ಸರ್ಕಾರ ಯಾವ ಡಿಜಿಟಲ್ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿತ್ತೋ, ಈಗ ಅದೇ ವ್ಯವಸ್ಥೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಅಮೆರಿಕದ ಒತ್ತಡಕ್ಕೆ ಮಣಿಯಿತೇ ಮೋದಿ ಸರ್ಕಾರ?
ವಿಶೇಷವೆಂದರೆ, ಭಾರತದ ಈ ಶೂನ್ಯ ಶುಲ್ಕ ವ್ಯವಸ್ಥೆಯಿಂದ ವಿದೇಶಿ ಪಾವತಿ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಈ ಹಿಂದೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಇದ್ದಕ್ಕಿದ್ದಂತೆ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿರುವುದು ಅಂತರಾಷ್ಟ್ರೀಯ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಾಡಲಾಗಿದೆಯೇ? ಈ ಸಮಯದಲ್ಲೇ ಇಂತಹ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.








