ನವದೆಹಲಿ: ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದ್ದರಿಂದ ಧಾರ್ಮಿಕ ಆಕ್ಷೇಪಗಳನ್ನು ಹೊಂದಿರುವವರು ಅಥವಾ ಆತ್ಮಸಾಕ್ಷಿಗೆ ಅನುಗುಣವಾಗಿ ಗೀತೆಯ ವಿವಾದಿತ ಚರಣಗಳನ್ನು ಹಾಡಲು ನಿರಾಕರಿಸಿದರೆ, ಅವರ ಮೇಲೆ ಯಾವುದೇ ದಂಡನಾತ್ಮಕ ಕ್ರಮಗಳನ್ನು ಜರುಗಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಿಜೋ ಎಮ್ಯಾನುಯೆಲ್ ತೀರ್ಪು ಉಲ್ಲೇಖಿಸಿದ ಪೀಠ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ವಿಚಾರಣೆ ನಡೆಸಿತು. ಇದೇ ವೇಳೆ 1986ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಬಿಜೋ ಎಮ್ಯಾನುಯೆಲ್ ಮತ್ತು ಕೇರಳ ರಾಜ್ಯದ ನಡುವಿನ ಐತಿಹಾಸಿಕ ತೀರ್ಪನ್ನು ನ್ಯಾಯಾಲಯ ನೆನಪಿಸಿದೆ. ಅಂದು ರಾಷ್ಟ್ರೀಯ ಗೀತೆ ಹಾಡಲು ಗೌರವಪೂರ್ವಕವಾಗಿ ನಿರಾಕರಿಸಿದ ಶಾಲಾ ಮಕ್ಕಳ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿತ್ತು. ಅದೇ ತತ್ವ ಈಗ ವಂದೇ ಮಾತರಂ ಹಾಡುವುದಕ್ಕೂ ಅನ್ವಯವಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಸರ್ಕಾರದ ಹೊಣೆಗಾರಿಕೆ
ವಂದೇ ಮಾತರಂ ಗೀತೆಯ ಕೊನೆಯ ನಾಲ್ಕು ಚರಣಗಳು ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತವೆ ಎಂದು ಆರೋಪಿಸಿ ಸಂಗೀತಗಾರ ಟಿ ಎಂ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಕೋರ್ಟ್ ಈ ನಿಲುವು ತಳೆದಿದೆ. ರಾಷ್ಟ್ರೀಯ ಗೀತೆ ಯಾವುದು ಎಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ಹಾಗೆಯೇ ವಂದೇ ಮಾತರಂನಲ್ಲಿ ಎಷ್ಟು ಚರಣಗಳಿರಬೇಕು ಎಂದು ತೀರ್ಮಾನಿಸುವುದು ಪ್ರಜಾಪ್ರಭುತ್ವದ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವಂತಿಲ್ಲ ಎಂದು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಸ್ಪಷ್ಟಪಡಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಜಾತ್ಯತೀತ ಸ್ವರೂಪದ ಬಗ್ಗೆ ಮಾತನಾಡಿದ ನ್ಯಾಯಪೀಠವು, ಅಮೆರಿಕದ ರಾಷ್ಟ್ರೀಯ ಗೀತೆಯಲ್ಲಿ ದೇವರು ಎಂಬ ಪದದ ಉಲ್ಲೇಖವಿರುವುದನ್ನು ಉದಾಹರಿಸಿತು. ಇಂತಹ ಧಾರ್ಮಿಕ ಅಂಶಗಳು ಸಂವಿಧಾನದ ಜಾತ್ಯತೀತ ಸ್ವರೂಪದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆಯ ಅಡಿಯಲ್ಲಿ ಗಾಯನಕ್ಕೆ ಅಡ್ಡಿಪಡಿಸುವವರಿಗೆ ಶಿಕ್ಷೆ ವಿಧಿಸಲು ಅವಕಾಶವಿದ್ದರೂ, ಹಾಡದವರನ್ನು ಅಪರಾಧಿಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ತೀರ್ಪಿನ ಸಾರಾಂಶವಾಗಿದೆ.
ಕೋರ್ಟ್ ಹಾಲ್ ನಲ್ಲಿ ವಕೀಲರ ನಡುವೆ ತೀವ್ರ ವಾಗ್ವಾದ
ಈ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅರ್ಜಿದಾರರ ಪರ ವಕೀಲ ಮುರಳೀಧರ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಜಾತ್ಯತೀತ ಮನೋಭಾವ ಇಷ್ಟೊಂದು ಸಂಕುಚಿತವಾಗಿರಲು ಸಾಧ್ಯವಿಲ್ಲ ಎಂದ ಮೆಹ್ತಾ, ನಕ್ಸಲರ ಆಲೋಚನೆಯಂತೆ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುರಳೀಧರ್, ಈ ಕೂಡಲೇ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಆದರೆ ಮೆಹ್ತಾ ಅವರು ತಮ್ಮ ಮಾತಿಗೆ ಬದ್ಧರಾಗಿರುವುದಾಗಿ ತಿಳಿಸಿ ಕ್ಷಮೆ ಕೇಳಲು ನಿರಾಕರಿಸಿದರು.








