ಮಂಗಳೂರು: ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಒಂದು ಪ್ರಹಸನ ಮತ್ತು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಜನರನ್ನು ಮರುಳು ಮಾಡಲು ಸರ್ಕಾರ ಬೃಹತ್ ಮೊತ್ತದ ಯೋಜನೆಗಳನ್ನು ಘೋಷಿಸಿದೆಯೇ ಹೊರತು, ಇವುಗಳನ್ನು ಅನುಷ್ಠಾನಗೊಳಿಸುವ ಯಾವುದೇ ಇಚ್ಛಾಶಕ್ತಿ ಅಥವಾ ಆರ್ಥಿಕ ಶಕ್ತಿ ಸರ್ಕಾರಕ್ಕಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
ಆರ್ಥಿಕ ಇಲಾಖೆಯ ಎಚ್ಚರಿಕೆಯನ್ನೂ ಮೀರಿ ಸುಳ್ಳು ಘೋಷಣೆ
ಸಂಪುಟ ಸಭೆಯಲ್ಲಿ ಸುಮಾರು 32,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿರುವುದರ ಹಿಂದೆ ದೊಡ್ಡ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿರುವ ಸತೀಶ್ ಕುಂಪಲ, ಇದಕ್ಕೆ ಪೂರಕವಾದ ಮಹತ್ವದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ರಾಜ್ಯದ ಆರ್ಥಿಕ ಇಲಾಖೆಯು ತೀವ್ರ ಹಣದ ಕೊರತೆಯ ಹಿನ್ನೆಲೆಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದಂತೆ ಸಂಪುಟ ಸಭೆಯ ಹಿಂದಿನ ದಿನವೇ ಸ್ಪಷ್ಟವಾದ ಟಿಪ್ಪಣಿ ನೀಡಿದೆ. ಆದರೂ ಜನರ ಚಪ್ಪಾಳೆ ಗಿಟ್ಟಿಸಲು ಮುಖ್ಯಮಂತ್ರಿಗಳು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಖಜಾನೆ ಖಾಲಿ, ಘೋಷಣೆಗಳು ಭರ್ಜರಿ
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಕುಂಪಲ, ಈಗಾಗಲೇ 2026-27ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ ಬರೋಬ್ಬರಿ 27,000 ಕೋಟಿ ರೂಪಾಯಿಗಳ ಕೊರತೆಯನ್ನು ಸರ್ಕಾರ ಎದುರಿಸುತ್ತಿದೆ ಎಂದು ಆರ್ಥಿಕ ಇಲಾಖೆಯೇ ಕೈಚೆಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ಘೋಷಿಸಿರುವ ಈ 32,000 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿ ಡಿಕೆಶಿ ಅವರು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದು ಬರೀ ಅಂಕಿಅಂಶಗಳ ಆಟವೇ ಹೊರತು ಜನರಿಗೆ ಸಿಗುವ ಲಾಭವಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಕರಾವಳಿ ಜನರಿಗೆ ಮೋಸ ಮಾಡುವ ಮಹಾ ನಾಟಕ
ಮುಖ್ಯಮಂತ್ರಿಗಳು ಮತ್ತು ಸಚಿವರ ದಂಡು ಮಂಗಳೂರಿಗೆ ಬಂದು ಹೋದ ಪುಟ್ಟ ಬಂದ ಪುಟ್ಟ ಎನ್ನುವಂತೆ ಬರಿಗೈಲಿ ವಾಪಸ್ ಹೋಗಿದ್ದಾರೆ. ಜಿಲ್ಲೆಯ ಜನರಿಗೆ ಅಭಿವೃದ್ಧಿಯ ಆಸೆ ತೋರಿಸಿ ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಈ ಹೊಸ ನಾಟಕವಾಡಲಾಗಿದೆ. ಸರ್ಕಾರದ ಈ ಸುಳ್ಳು ಭರವಸೆಗಳನ್ನು ಕರಾವಳಿಯ ಪ್ರಜ್ಞಾವಂತ ಜನರು ನಂಬುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಈ ವಂಚನೆಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸತೀಶ್ ಕುಂಪಲ ತಮ್ಮ ಪ್ರಕಟಣೆಯಲ್ಲಿ ಗುಡುಗಿದ್ದಾರೆ.








