ಶಾರ್ಜಾದಲ್ಲಿ ಎಡವಿದ ಆರ್ ಸಿಬಿ : ಅಗ್ರಸ್ಥಾನಕ್ಕೇರಿದ ಚೆನ್ನೈ
ಶಾರ್ಜಾದಲ್ಲಿ ಪಂದ್ಯ ಆರಂಭವಾದಾಗ ಸಿಕ್ಸರ್, ಬೌಂಡರಿಗಳ ಅಬ್ಬರದ ಜೊತೆ ರನ್ ಮಳೆಯ ನಿರೀಕ್ಷೆ ಇತ್ತು. ಆರ್ ಸಿಬಿ ಇನ್ನಿಂಗ್ಸ್ ನ ಮೊದಲಾರ್ಧದಲ್ಲಿ ಬ್ಯಾಟ್ಸ್ ಮನ್ ಗಳದ್ದೇ ಆಟವಾಗಿತ್ತು. ಚೆನ್ನೈ ಇನ್ನಿಂಗ್ಸ್ ನ ಮೊದಲ ಹತ್ತು ಓವರುಗಳಲ್ಲಿ ಕೂಡ ಆರ್ ಸಿಬಿ ಬೌಲರ್ ಗಳಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಶಾರ್ಜಾದಲ್ಲಿ ಅಂದುಕೊಂಡಂತೆ ರನ್ ಬಾರದೇ ಇದ್ರೂ ಸಂಘಟಿತ ಹೋರಾಟ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ್ರು. ಆರ್ ಸಿಬಿ ಇನ್ನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಸ್ಪೋಟಕ ಆರಂಭ ತಂದುಕೊಟ್ರು. ಮೊದಲ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಆರ್ ಸಿಬಿ 90 ರನ್ ಗಳನ್ನು ಗಳಿಸಿತ್ತು. 12ನೇ ಓವರ್‍ನಲ್ಲಿ ಆರ್ ಸಿಬಿ 100 ರನ್ ಗಳ ಗಡಿ ಕೂಡ ದಾಟಿತ್ತು.
ಕೇವಲ 35 ಎಸೆತಗಳಲ್ಲಿ ಪಡಿಕಲ್ ಅರ್ಧಶತಕ ಸಿಡಿಸಿದರು. ಹಿಂದೆಯೇ ಕೊಹ್ಲಿ 36 ಎಸೆತಗಳಲ್ಲಿ ಅರ್ಧಶತಕದ ಸಂಭ್ರಮ ಆಚರಿಸಿಕೊಂಡ್ರು. ಈ ಹಂತದಲ್ಲಿ ಆರ್ ಸಿಬಿ ರನ್ ಶಿಖರ ಏರುವ ನಿರೀಕ್ಷೆ ಇತ್ತು. ಆದರೆ ಡ್ವೈನ್ ಬ್ರಾವೋ 53 ರನ್ ಗಳಿಸಿದ್ದ ವಿರಾಟ್ ಗೆ ಪೆವಿಲೀಯನ್ ದಾರಿ ತೋರಿಸಿದ್ರು.
ಬಳಿಕ ಪಡಿಕಲ್ ಜೊತೆ ಸೇರಿದ ಎಬಿಡಿ ವಿಲಿಯರ್ಸ್ ಗೆ ಚೆನ್ನೈ ಬೌಲರ್ ಗಳು ಕಡಿವಾಣ ಹಾಕಿದ್ರು. ಡಿವಿಲಿಯರ್ಸ್ 12 ರನ್ ಗಳಿಸಿ ಶಾರ್ದೂಲ್ ಗೆ ವಿಕೆಟ್ ಒಪ್ಪಿಸಿದ್ರು. ಮುಂದಿನ ಎಸೆತದಲ್ಲೇ ಶಾರ್ದೂಲ್ 70 ರನ್ ಗಳಿಸಿದ್ದ ಪಡಿಕಲ್ ವಿಕೆಟ್ ಪಡೆದು ಆರ್ ಸಿಬಿ ಓಟಕ್ಕೆ ಬ್ರೇಕ್ ಹಾಕಿದ್ರು.
ಇದಾದ ನಂತರ ಆರ್ ಸಿಬಿ ಬ್ಯಾಟ್ಸ್ ಮೆನ್ ಗಳ ಪೆವಿಲಿಯನ್ ಪರೇಡ್ ನಡೆಯಿತು. ಅಂತಿಮವಾಗಿ ನಿಗದಿತ 20 ಓವರುಗಳಲ್ಲಿ ಆರ್ ಸಿಬಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಚೆನ್ನೈ ಪರ ಬ್ರಾವೋ 3 ವಿಕೆಟ್ ಹಾರಿಸಿದ್ರೆ, ಶಾದೂಲ್ 2 ವಿಕೆಟ್ ಪಡೆದುಕೊಂಡ್ರು.
ಈ ಗುರಿ ಬೆನ್ನಟ್ಟಿ ಹೊರಟ ಚೆನ್ನೈ ಕೂಡ ಉತ್ತಮ ಆರಂಭ ಪಡೆಯಿತು. ಡು ಪ್ಲೆಸಿಸ್ ಮತ್ತು ರುತುರಾಜ್ ಅಬ್ಬರದ ಆಟದ ಪರಿಣಾಮ ಪವರ್ ಪ್ಲೇನಲ್ಲಿ 59 ರನ್ ಗಳು ಹರಿದು ಬಂತು. ಈ ವೇಳೆ ಬೌಲಿಂಗ್ ಗೆ ಬಂದ ಚಹಲ್?? ಮೊದಲು ಗಾಯಕ್ವಾಡ್ ಆಟಕ್ಕೆ ಕಡಿವಾಣ ಹಾಕಿದ್ರು. ಇದರ ಬೆನ್ನಲ್ಲೇ ಮ್ಯಾಕ್ಸ್ ವೆಲ್ ತನ್ನ ಮೊದಲ ಎಸೆತದಲ್ಲೇ 26 ಎಸೆತಗಳಲ್ಲಿ 31 ರನ್ ಸಿಡಿಸಿದ್ದ ಡು ಪ್ಲೆಸಿಸ್ ವಿಕೆಟ್ ಪಡೆದ್ರು.
ಇದಾದ ಬಳಿಕ ಮೊಯಿನ್ ಅಲಿ ಮತ್ತು ಅಂಬಟಿ ರಾಯುಡು 47 ರನ್ ಗಳ ಜೊತೆಯಾಟ ಆಡಿದ್ರು. ಇದಾದ ನಂತರ ಸುರೇಶ್ ರೈನಾ ಮತ್ತು ಮಹೇಂದ್ರ ಸಿಂಗ್ ಧೋನಿ ಅನುಭವದ ಆಟದ ಮುಂದೆ ಆರ್ ಸಿಬಿ ರಣತಂತ್ರ ನಡೆಯಲಿಲ್ಲ. ಚೆನ್ನೈ 18.1 ಓವರುಗಳಲ್ಲಿ ಗೆಲುವಿನ ದಡ ಸೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರ್ ಸಿಬಿ ಪರ ಹರ್ಷಲ್ ಪಟೇಲ್ 2 ವಿಕೆಟ್ ಪಡೆದುಕೊಂಡ್ರು.









