ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಅಂದು ತುರ್ತು ಪರಿಸ್ಥಿತಿ ಜಾರಿಯಾಗದಿದ್ದರೆ, ಹೋರಾಟದ ನೆಪದಲ್ಲಿ ಭಾರತವನ್ನು ಛಿದ್ರಗೊಳಿಸುವ ದೊಡ್ಡ ಹುನ್ನಾರ ನಡೆದಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ತಾವೇ ಪ್ರಜಾಪ್ರಭುತ್ವದ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ತುರ್ತು ಪರಿಸ್ಥಿತಿಯ ನಿಜವಾದ ಇತಿಹಾಸವೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ದೇಶವನ್ನು ಅರಾಜಕತೆಯತ್ತ ತಳ್ಳಲಾಗಿತ್ತು
ಜಯಪ್ರಕಾಶ್ ನಾರಾಯಣ್ ಹಾಗೂ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ನಡೆದ ಚಳವಳಿಗಳು ದೇಶದ ಶಾಂತಿಯನ್ನು ಕದಡಿದ್ದವು. ರೈಲು ಸೇವೆಗಳನ್ನು ಸ್ಥಗಿತಗೊಳಿಸಿ, ಸಾರ್ವಜನಿಕ ಜೀವನಕ್ಕೆ ಅಡ್ಡಿಪಡಿಸಲಾಗಿತ್ತು. ಇಡೀ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿ, ಅಸ್ಥಿರತೆ ಉಂಟುಮಾಡುವ ಪ್ರಯತ್ನಗಳು ನಡೆದಿದ್ದವು ಎಂದು ಹರಿಪ್ರಸಾದ್ ವಿವರಿಸಿದರು.
ಕ್ಷುಲ್ಲಕ ಕಾರಣಕ್ಕೆ ಸದಸ್ಯತ್ವ ಅನರ್ಹತೆ
ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆದ ಸಂಚಿನ ಬಗ್ಗೆ ಮಾತನಾಡಿದ ಅವರು, ಕೇವಲ ಧ್ವನಿವರ್ಧಕಕ್ಕೆ ಹೆಚ್ಚಿನ ಹಣ ನೀಡಿದ್ದಾರೆ ಮತ್ತು ಆಪ್ತ ಕಾರ್ಯದರ್ಶಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂಬ ಎರಡು ಸಣ್ಣ ಕಾರಣಗಳಿಗಾಗಿ ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನೇ ಅನರ್ಹಗೊಳಿಸಲಾಗಿತ್ತು. ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರು, ಸಂಚಾರಿ ಪೊಲೀಸರು ನೀಡುವ ದಂಡದ ರಶೀದಿಯಷ್ಟು ಸಾಂದ್ರತೆ ಇಲ್ಲದ ಆರೋಪಗಳಿಗೆ ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಬರ್ಖಾಸ್ತು ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು ಎಂದು ಇತಿಹಾಸವನ್ನು ನೆನಪಿಸಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಪೊಲೀಸರು ಮತ್ತು ಸೈನಿಕರು ಸರ್ಕಾರದ ಆದೇಶಗಳನ್ನು ಪಾಲಿಸಬಾರದು ಎಂದು ಪ್ರಚೋದನಕಾರಿ ಕರೆ ನೀಡಿದ್ದರು. ಇತ್ತ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿಯವರ ನಿವಾಸಕ್ಕೆ ಯಾರೂ ಪ್ರವೇಶಿಸದಂತೆ ಅಥವಾ ಹೊರಬರದಂತೆ ದಿಗ್ಬಂಧನ ವಿಧಿಸಲು ಜನರಿಗೆ ಕರೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ದೇಶದಲ್ಲಿ ಆಂತರಿಕ ದಂಗೆಯ ಪರಿಸ್ಥಿತಿಯನ್ನು ನಿರ್ಮಿಸಿದ್ದವು. ಹೀಗಾಗಿ ದೇಶದ ಏಕತೆಯನ್ನು ಕಾಪಾಡಲು ಇಂದಿರಾ ಗಾಂಧಿಯವರು ಅಂದಿನ ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹದ್ ಅವರ ಅನುಮೋದನೆಯೊಂದಿಗೆ 352ನೇ ವಿಧಿಯಡಿ ತುರ್ತು ಪರಿಸ್ಥಿತಿ ಘೋಷಿಸಬೇಕಾಯಿತು ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಆರ್ಎಸ್ಎಸ್ ಅಥವಾ ಬಿಜೆಪಿಯ ಯಾವುದೇ ಒಬ್ಬ ವ್ಯಕ್ತಿಯೂ ಪ್ರಾಣತ್ಯಾಗ ಮಾಡಿಲ್ಲ. ಒಂದು ವೇಳೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವಿತ್ತು ಎಂದು ಸಾಬೀತುಪಡಿಸಿದರೆ ತಾವು ಬಿಜೆಪಿಯ ಗುಲಾಮರಾಗುವುದಾಗಿ ಹರಿಪ್ರಸಾದ್ ಬಹಿರಂಗ ಸವಾಲು ಹಾಕಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದ್ದು, ಧರ್ಮಾಧಾರಿತ ಆಡಳಿತಕ್ಕಿಂತ ಪ್ರಜಾಪ್ರಭುತ್ವವೇ ಶ್ರೇಷ್ಠ ಎಂದು ಅವರು ಅಭಿಪ್ರಾಯಪಟ್ಟರು.








