ಬೆಂಗಳೂರು: ಭಾರತದ ಮಣ್ಣಿನ ಬಗ್ಗೆ ಕೃತಜ್ಞತೆ ಮತ್ತು ಗೌರವ ಉಳ್ಳವರ ಜೊತೆ ಮಾತ್ರ ಹಿಂದೂಗಳು ವ್ಯಾಪಾರ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರೆ ಭವ್ಯ ಮೋಹನ್ ಗೌಡ ತಿಳಿಸಿದ್ದಾರೆ. ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜಿಸಿದ್ದ ಪ್ರಾಂತ ಪ್ರಶಿಕ್ಷಣ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯಿಂದ ನಮ್ಮ ಮಕ್ಕಳನ್ನು ಹೊರತರುವ ಪ್ರಯತ್ನಗಳು ಮನೆಯಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿದರು.
ವ್ಯಾಪಾರದಲ್ಲಿ ಬೇಕು ರಾಷ್ಟ್ರಭಕ್ತಿಯ ಕಿಚ್ಚು
ಕೇವಲ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ಖರೀದಿ ಮಾಡುವುದನ್ನು ಬಿಡಿ ಎಂದು ಸಲಹೆ ನೀಡಿದ ಭವ್ಯ ಮೋಹನ್ ಗೌಡ, ನಾವು ವ್ಯಾಪಾರ ಮಾಡುವ ವ್ಯಕ್ತಿ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತಾರೆಯೇ? ಈ ನೆಲದ ಬಗ್ಗೆ ಅವರಿಗೆ ಕೃತಜ್ಞತೆ ಇದೆಯೇ? ಭಾರತದ ಮಣ್ಣನ್ನು ಅವರು ಗೌರವಿಸುತ್ತಾರೆಯೇ ಎಂಬ ಅಂಶಗಳನ್ನು ಗಮನಿಸಿ ವ್ಯಾಪಾರ ಮಾಡಬೇಕಾಗಿದೆ. ದೇಶಪ್ರೇಮ ಉಳ್ಳವರ ಜೊತೆ ವ್ಯವಹರಿಸುವುದೇ ನಿಜವಾದ ರಾಷ್ಟ್ರ ಭಕ್ತಿ ಎಂದು ಅವರು ಅಭಿಪ್ರಾಯಪಟ್ಟರು.
ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕಿತ್ತೊಗೆಯಿರಿ
ನಮ್ಮ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯತ್ತ ಆಕರ್ಷಿತರಾಗುತ್ತಿರುವುದು ಆತಂಕಕಾರಿ ವಿಷಯ. ಗಿಡ, ಮರ, ಪ್ರಕೃತಿಯಲ್ಲಿ ದೇವರನ್ನು ಕಾಣುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಆದರೆ ಇಂದು ಹುಟ್ಟುಹಬ್ಬದ ಹೆಸರಿನಲ್ಲಿ ಕೇಕ್ ಕತ್ತರಿಸುವುದು, ಕ್ಯಾಂಡಲ್ ಹಾರಿಸುವುದು ನಮ್ಮ ಸಂಪ್ರದಾಯವಲ್ಲ. ಮಗುವಿನ ಭಾವಚಿತ್ರ ಇರುವ ಕೇಕ್ ಅನ್ನು ಚಾಕುವಿನಿಂದ ಕತ್ತರಿಸುವುದು ಅಶುಭ ಮತ್ತು ಸಂಸ್ಕೃತಿ ವಿರೋಧಿ ಆಚರಣೆ. ಅದರ ಬದಲಾಗಿ ಹುಟ್ಟುಹಬ್ಬದಂದು ಮನೆಯಲ್ಲಿ ದೀಪ ಬೆಳಗಿಸಿ, ಹಿರಿಯರ ಆಶೀರ್ವಾದ ಪಡೆದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಪದ್ಧತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಅವರು ಹೇಳಿದರು.
ಅನ್ಯಾಯದ ವಿರುದ್ಧ ಚಂಡಿ ಚಾಮುಂಡಿಯಾಗಿ
ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದ ಅವರು, ಮನೆಯೊಳಗೆ ಅನ್ನಪೂರ್ಣೇಶ್ವರಿ, ಸರಸ್ವತಿ ಮತ್ತು ಲಕ್ಷ್ಮಿಯಂತೆ ಇರುವ ಮಹಿಳೆಯರು, ಸಮಾಜಕ್ಕೆ ಬಂದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ನಮ್ಮ ಮೇಲೆ ಯಾರಾದರೂ ವಕ್ರದೃಷ್ಟಿ ಬೀರಿದರೆ ಅಥವಾ ಧರ್ಮಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದರೆ ನಾವು ದುರ್ಗೆಯಾಗಬೇಕು, ಅಗತ್ಯಬಿದ್ದರೆ ಚಂಡಿ ಚಾಮುಂಡಿಯಾಗಿ ಅವತಾರ ತಾಳಬೇಕು ಎಂದು ಮಹಿಳೆಯರಿಗೆ ಸ್ಫೂರ್ತಿ ನೀಡಿದರು. ನಮ್ಮಲ್ಲಿ ಕ್ಷಾತ್ರ ತೇಜಸ್ಸು ವೃದ್ಧಿಯಾಗಬೇಕು ಮತ್ತು ರಾಷ್ಟ್ರ ರಕ್ಷಣೆಗೆ ನಾವೆಲ್ಲರೂ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.








