ಬೆಂಗಳೂರು: ನನ್ನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ, ಅಂಥವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಡಿಎಲ್ಎಫ್ ಕಂಪನಿಯಿಂದ ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಎಲ್ಎಫ್ ಹಗರಣದ ಬಗ್ಗೆ ಮಾತನಾಡುವವರು ಮೊದಲು ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗೂ, ಪ್ರಧಾನಿಯಾಗಲು ಹವಣಿಸುತ್ತಿರುವ ದೆಹಲಿಯ ವ್ಯಕ್ತಿಗೂ ಆ ಕಂಪನಿಗೂ ಇರುವ ಸಂಬಂಧವೇನು ಎಂಬುದನ್ನು ಬಹಿರಂಗಪಡಿಸಲಿ. ಆಗ ಸತ್ಯ ತಾನಾಗಿಯೇ ಹೊರಬರುತ್ತದೆ. ರಾಜ್ಯದಲ್ಲಿ ಅವರದೇ ಸರ್ಕಾರ ಇರುವುದರಿಂದ ಧೈರ್ಯವಿದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಿಂಗಪುರ ಪ್ರವಾಸ ಕೈಗೊಂಡಿದ್ದಾಗ ನೈಸ್ ಕಂಪನಿಯ ವ್ಯಕ್ತಿ ಬಂದಿದ್ದರು, ಅಂದು ನಾನು ಅವರಿಗೆ ಏನು ಹೇಳಿ ಕಳಿಸಿದ್ದೆ ಎಂಬುದು ಅವರಿಗೆ ನೆನಪಿರಲಿ. ಲಾಟರಿ ನಿಷೇಧ ಮಾಡುವಾಗ ತಮಿಳುನಾಡಿನಿಂದ ಹಣದ ಬ್ಯಾಗ್ ಹಿಡಿದು ಬಂದವರನ್ನು ಹೇಗೆ ಉಗಿದು ಕಳಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಬಿಡದಿ ಟೌನ್ಶಿಪ್ ಯೋಜನೆಯು ಕೇವಲ ಕಮಿಷನ್ ಪಡೆಯುವ ದಂಧೆಯಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. 2006ರಲ್ಲೇ ಈ ಬಗ್ಗೆ ಸದನ ಸಮಿತಿ ವರದಿ ನೀಡಿದ್ದರೂ ಈಗ ಹೊಸ ಸಮಿತಿ ರಚಿಸಿರುವುದು ನಗೆಪಾಟಲಿನ ಸಂಗತಿ. ಈ ಸಮಿತಿಯಲ್ಲಿದ್ದವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ, ಅವರಿಗೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಪ್ರಶ್ನಿಸಿದರು. ಹಣದ ಮದದಲ್ಲಿ ಲೂಟಿ ಮಾಡುವುದನ್ನೇ ಕೆಲಸ ಮಾಡಿಕೊಂಡರೆ ಮುಂದಿನ ಚುನಾವಣೆಯಲ್ಲಿ ಸರ್ವನಾಶ ಆಗುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಈ ಯೋಜನೆಯಿಂದ ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳಲಿದ್ದಾರೆ. ಇದನ್ನು ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಕುಮಾರಸ್ವಾಮಿ, ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವಂತೆ ಶಾಸಕರಿಗೆ ಸೂಚಿಸಿದರು. ರಾಜ್ಯದಲ್ಲಿ ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಹಿತವನ್ನು ಬಲಿಗೊಟ್ಟು ಜಾರಿಗೆ ತರಲು ಹೊರಟಿರುವ ಬಿಡದಿ ಟೌನ್ಶಿಪ್ ಮತ್ತು ಸರ್ಕಾರದ ಇತರ ಅವ್ಯವಹಾರಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು. ವಿರೋಧ ಪಕ್ಷವಾಗಿ ನಾವು ಜನರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಅವರು ಶಾಸಕರಿಗೆ ಕರೆ ನೀಡಿದರು. ದಲಿತರ ಭೂಮಿ ಕಬಳಿಸಲು ದಾಖಲೆ ಸೃಷ್ಟಿಸುವವರ ಬಗ್ಗೆಯೂ ನನಗೆ ಸಂಪೂರ್ಣ ಮಾಹಿತಿಯಿದೆ, ಸಮಯ ಬಂದಾಗ ಎಲ್ಲವನ್ನೂ ಬಯಲಿಗೆಳೆಯುತ್ತೇನೆ ಎಂದು ಅವರು ಗುಡುಗಿದರು.








