IPL 2021 | ತೂಗುಯ್ಯಾಲೆಯಲ್ಲಿದೆ ರಾಜಸ್ಥಾನದ ಪ್ಲೇ-ಆಫ್ ಭವಿಷ್ಯ
ಸನ್ ರೈಸರ್ಸ್ ಐಪಿಎಲ್ 14ನೇ ಸೀಸನ್ನಲ್ಲಿ ಪ್ಲೇ-ಆಫ್ ಕನಸನ್ನು ಕೈ ಬಟ್ಟಿದೆ. ಆದರೆ ಉಳಿದಿರುವ ಪಂದ್ಯಗಳಲ್ಲಿ ಉಳಿದ ತಂಡಗಳ ಕನಸನ್ನು ಕೂಡ ಛಿದ್ರ ಮಾಡುತ್ತಿದೆ.
ಸನ್ ರೈಸರ್ಸ್ ಬಲೆಗೆ ಮೊದಲು ಬಿದ್ದಿದ್ದು ರಾಜಸ್ಥಾನ ರಾಯಲ್ಸ್. ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ರಾಯಲ್ಸ್ ಸನ್ ರೈಸರ್ಸ್ ವಿರುದ್ಧ ಅನುಭವಿಸಿದ ಸೋಲು ಸಂಜು ಬಳಗದ ಪ್ಲೇ-ಆಫ್ ಕನಸನ್ನು ತೂಗುಯ್ಯಲೆಯಲ್ಲಿ ಇಟ್ಟಿದೆ.
ದುಬೈನಲ್ಲಿ ಟಾಸ್ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆರಿಸಿಕೊಂಡಿತು. ಇನ್ನಿಂಗ್ಸ್ ಅರಂಭಿಸಿದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ನಿರೀಕ್ಷಿತ ಆರಂಭ ನೀಡಲಿಲ್ಲ.
ಭುವನೇಶ್ವರ್ ಕುಮಾರ್ ಲೆವಿಸ್ರನ್ನು 2ನೇ ಓವರ್ನಲ್ಲೇ ಔಟ್ ಮಾಡಿದ್ರು. ಜೈಸ್ವಾಲ್ ಜೊತೆ ಸೇರಿದ ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಆಟಕ್ಕೆ ಇಳಿದ್ರು.
ಈ ಜೊತೆಯಾಟದಲ್ಲಿ ಸಿಕ್ಸರ್ಗಳು ಸರಾಗವಾಗಿ ಸಿಡಿಯದೇ ಇದ್ದರೂ ಬೌಂಡರಿಗಳು ಸಾಕಷ್ಟು ಬಂದವು ಈ ಹಂತದಲ್ಲಿ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36ರನ್ಗಳಿಸಿದ ಜೈಸ್ವಾಲ್ ಸಂದೀಪ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಲಿಯಂ ಲಿವಿಂಗ್ ಸ್ಟೋನ್ ಆಟಕ್ಕೆ ರಶೀದ್ ಖಾನ್ ಅಂತ್ಯ ಹಾಡಿದರು.
ಹಳಿ ತಪ್ಪುತ್ತಿದ್ದ ರಾಯಲ್ಸ್ ಇನ್ನಿಂಗ್ಸ್ಗೆ ಸ್ಯಾಮ್ಸನ್ ಮತ್ತು ಮಹಿಪಾಲ್ ಲೊಮ್ರೋರ್ ಆಸರೆಯಾದರು. ಸಂಜು ಅರ್ಧಶತಕ ಕೂಡ ಗಳಿಸಿದರು.
ಸ್ಲಾಗ್ ಓವರುಗಳಲ್ಲಿ ಈ ಆಟಗಾರರು ರನ್ ರೇಟ್ ಕೂಡ ಹೆಚ್ಚಿಸಿದರು. ಬೌಂಡರಿ ಮತ್ತು ಸಿಕ್ಸರ್ಗಳ ಸಂಖ್ಯೆ ಹೆಚ್ಚಿದವು. 57 ಎಸೆತಗಳಲ್ಲಿ 82 ರನ್ಗಳಿಸಿದ ಸ್ಯಾಮ್ಸನ್ ಕೊನೆಯ ಓವರ್ನಲ್ಲಿ ಔಟಾದರು.
ಪರಾಗ್ ಕೂಡ ಖಾತೆ ತೆರೆಯಲಿಲ್ಲ. ಲೊಮ್ರೊರ್ ಅಜೇಯ 29 ರನ್ಗಳಿಸಿದರು. ರಾಯಲ್ಸ್ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ಗಳಷ್ಟೇ ಗಳಿಸಿತ್ತು.
ಚೇಸಿಂಗ್ಗೆ ಇಳಿದ ಸನ್ರೈಸರ್ಸ್ಗೆ ಜೇಸನ್ ರಾಯ್ ಮತ್ತು ವೃದ್ಧಿಮಾನ್ ಸಾಹಾ ಉತ್ತಮ ಆರಂಭ ತಂದುಕೊಟ್ರು. ಮೊದಲ ಬಾರಿಗೆ ಹೈದ್ರಾಬಾದ್ ಇನ್ನಿಂಗ್ಸ್ ಹೊಸ ಲಯದಲ್ಲಿತ್ತು.
ಸಹಾ ಮತ್ತು ರಾಯ್ ಜೋಡಿ 57 ರನ್ ಸೇರಿಸಿತ್ತು. ಈ ಹಂತದಲ್ಲಿ 18 ರನ್ಗಳಿಸಿದ್ದ ಸಾಹಾ ಲೊಮ್ರೊರ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ರಾಯ್ ಬಿರುಸಿನ ಆಟ ಮುಂದುವರೆದಿತ್ತು. ನಾಯಕ ಕೇನ್ ವಿಲಿಯಮ್ಸನ್ ಸಾಥ್ ನೀಡಿದ್ರು.
ಸನ್ರೈಸರ್ಸ್ ಪರ ಆಡಿದ ಮೊದಲ ಪಂದ್ಯದಲ್ಲೇ ರಾಯ್ ಅರ್ಧಶತಕದ ಸಂಭ್ರಮ ಆಚರಿಸಿಕೊಂಡ್ರು. 42 ಎಸೆತಗಳಲ್ಲಿ 60 ರನ್ಗಳಿಸಿದ ರಾಯ್ ಚೇತನ್ ಸಕಾರಿಯಾ ಬೌಲಿಂಗ್ನಲ್ಲಿ ಸ್ಯಾಮ್ಸನ್ಗೆ ವಿಕೆಟ್ಗೆ ಒಪ್ಪಿಸಿದ್ರು. ರಾಯ್ ಹಿಂದೆಯೇ ಪ್ರಿಯಮ್ ಗಾರ್ಗ್ ಖಾತೆ ತೆರೆಯದೆ ಮುಸ್ತಫಿಝರ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದ್ರು.
ವಿಲಿಯಮ್ಸನ್ ಜೊತೆ ಸೇರಿದ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಕಟ್ಟುವ ಕೆಲಸದಲ್ಲಿ ತೊಡಗಿದರು. ಬೌಂಡರಿ, ಸಿಕ್ಸರ್ಗಳ ಬದಲು ಒಂದು, ಎರಡು ರನ್ಗಳನ್ನು ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇನ್ ವಿಲಿಯಮ್ಸನ್ 41 ಎಸೆತಗಳಲ್ಲಿ ಅಜೇಯ 51 ರನ್ಗಳಿಸಿದರೆ, ಅಭಿಷೇಕ್ಅಜೇಯ 21 ರನ್ಗಳಿಸಿದ್ರು. 18.3 ಓವರುಗಳಲ್ಲಿ ಗೆಲುವಿನ ಗುರಿ ಮುಟ್ಟಿತು.









