`ಬಂಡಾಯಗಾರ ನವಜೋತ್ ಸಿಂಗ್ ಸಿಧು’ Navjot Singh Sidhu saaksha tv
ಚಂಡೀಗಢ : ಪಂಜಾಬ್ ಕಾಂಗ್ರೆಸ್ ನಲ್ಲಿ ಮಹತ್ತರ ಬೆಳೆವಣಿಗೆ ನಡೆದಿದ್ದು, ನವಜೋತ್ ಸಿಂಗ್ ಸಿಧು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷದಿಂದ ಕೆಳಗಿಳಿದಿದ್ದಾರೆ.
ಕಳೆದ ಜುಲೈನಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ನವಜೋತ್ ಸಿಂಗ್ ಸಿಧು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ನವಜೋತ್ ಸಿಂಗ್ ಸಿಧು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ ಸಿಧು ಅವರು ಪಕ್ಷದ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ನಾನು ಈ ಕುರಿತು ಮೊದಲೇ ಹೇಳಿದ್ದೆ. ಈತ ಸ್ಥಿರವಾದ ಮನುಷ್ಯನಲ್ಲ ಮತ್ತು ಗಡಿರಾಜ್ಯ ಪಂಜಾಬ್ ಗೆ ಹೊಂದುದಿಲ್ಲ ಎಂದಿದ್ದಾರೆ.
ಅಂದಹಾಗೆ ನವಜೋತ್ ಸಿಂಗ್ ಸಿಧು ಮೊದಲಿನಿಂದಲೂ ಏಕಾಏಕಿ ಸಡನ್ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ನಿಂತಲ್ಲಿ ನಿಲ್ಲದ, ಬಂಡಾಯಗಾರ. 2004ರಲ್ಲಿ ಬಿಜೆಪಿ ಸೇರಿ ಸಂಸದರಾಗಿದ್ದ ಸಿಧು, ನಂತರ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು, 2017ರಲ್ಲಿ ಕಾಂಗ್ರೆಸ್ ಸೇರಿದ್ರು. ಅಲ್ಲದೆ ವಿಧಾನಸಭೆಗೂ ಪ್ರವೇಶಿಸಿ ಅಮರಿಂದರ್ ಸಿಂಗ್ ಸಂಪುಟದಲ್ಲಿ ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆ ಸ್ಥಾನ ಸಿಗದಿದ್ದಾಗ ಅಮರೀಂದರ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದಿದ್ದರು.
ಅಲ್ಲದೆ ಪಕ್ಷದಲ್ಲಿ ಹಿಡಿತ ಸಾಧಿಸಲು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ರು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪದ ಕಾರಣ, ಆಮ್ ಆದ್ಮಿ ಪಾರ್ಟಿ ಕಡೆ ವಾಲಿದ್ರು. ಇತ್ತ ಮತ್ತೆ ಬಿಜೆಪಿ ಸೇರಲು ಕೂಡ ತಯಾರಿಸಿ ನಡೆಸಿದ್ದರು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಅಧ್ಯಕ್ಷ ಸ್ಥಾನ ನೀಡಿ, ಪಕ್ಷದಲ್ಲೇ ಉಳಿಸಿಕೊಂಡಿತು. ಆದ್ರೆ ಇದೀಗ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.









