ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಕಿರುತೆರೆ ನಟನ ವಿರುದ್ಧ ಕೇಸ್
“ಅಪ್ಪ – ಅಮ್ಮ… ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ.. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ.. ನನ್ನ ಮನಸ್ಥಿತಿ ಸರಿ ಇಲ್ಲ.. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ, ಕ್ಷಮಿಸಿ’. ಇದು ಕಿರುತೆರೆ ನಟಿ 25 ವರ್ಷದ ಸವಿ ಮಾದಪ್ಪ ( ಸೌಜನ್ಯ) ತಾವು ಆತ್ಮಹತ್ಯೆ ಮಾಡಿಕೊಳ್ಳುವ ಎರೆಡು ದಿನಗಳ ಹಿಂದೆ ಬರೆದಿಟ್ಟಿರುವ ಡೆತ್ ನೋಟ್.
ಆದ್ರೆ ಈ ಪ್ರಕರಣದಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳ ಸಾವಿಗೆ ತೆಲುಗಿನ ಕಿರುತೆರೆ ನಟನೇ ಕಾರಣ ಎಂದು ಸೌಜನ್ಯ ತಂದೆ ತಾಯಿ ಆರೋಪ ಮಾಡಿದ್ದಾರೆ. ಅಲ್ಲದೇ ಸೌಜನ್ಯ ತಂದೆ ನಟನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.ಹೌದು ಸೌಜನ್ಯ ತಂದೆ ಪ್ರಭು ಮಾದಪ್ಪ ಅವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ತೆಲುಗು ನಟ ವಿವೇಕ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ.ಇದರ ಬೆನ್ನಲ್ಲೇ ಇದೀಗ ಪೊಲೀಸರು ತೆಲುಗು ನಟ ವಿವೇಕ್ ಹಾಗೂ ಆತನ ಪಿಎ ಮಹೇಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಕೇಸ್ ದಾಖಲಾಗಿದೆ.ನನ್ನ ಮಗಳ ಸಾವಿಗೆ ನಟ ವಿವೇಕ್ ಹಾಗೂ ಮಹೇಶ್ ಕಿರುಕುಳವೇ ಕಾರಣ.
ನನ್ನ ಮಗಳು ಸೌಜನ್ಯ ಮಾದಪ್ಪ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಒಂದು ವರ್ಷದ ಹಿಂದೆ ಕುಂಬಳಗೋಡು ಬಳಿಯ ಸನ್ವರ್ಥ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದಳು.ಈ ವೇಳೆ ನನ್ನ ಮಗಳು ಸೌಜನ್ಯಾಳಿಗೆ ವಿವೇಕ್ ಎಂಬುವನ ಪರಿಚಯವಾಗಿತ್ತು. ವಿವೇಕ್ ನನ್ನ ಮಗಳನ್ನು ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ. ಈ ವಿಚಾರವನ್ನು ಮಗಳು ಸೌಜನ್ಯ, ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು.ಸೆಪ್ಟೆಂಬರ್ 30ರಂದು ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ 9 ಗಂಟೆಗೆ ಫೋನ್ ಮಾಡಿದ್ದ. ಇದಾದ ಒಂದು ಗಂಟೆ ನಂತರ ನನ್ನ ದೊಡ್ಡ ಮಗಳು ಭಾಗ್ಯಶ್ರೀ ಕರೆಮಾಡಿ, ಸವಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದಳು. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಅವಳ ಸಹಾಯಕನೇ ಕಾರಣ ಎಂದು ದೂರಿದ್ದಾರೆ.
ಇಂಗ್ಲಿಷ್ನಲ್ಲಿ ಡೆತ್ ನೋಟ್ ಬರೆಯಲಾಗಿದೆ. ನನ್ನ ಗೆಲುವಿಗೆ ಸಹಾಯ ಮಾಡಿ ಎಲ್ಲರಿಗೂ ಧನ್ಯವಾದಗಳು. ಜೀವನದಲ್ಲಿ ತುಂಬಾನೆ ಜವಬ್ದಾರಿ ಇತ್ತು. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನಾನು ಮಾತು ಕೊಟ್ಟ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಐ ಲವ್ ಯು ಪಪ್ಪ, ಅಮ್ಮ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಈ ಸ್ಥಿತಿಯಲ್ಲಿ ಮನೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ನನಗೆ ಮುಂದೆ ಒಳ್ಳೆಯ ಭವಿಷ್ಯ ಇತ್ತು ಅನ್ನೋದು ಗೊತ್ತಿದೆ, ಆದರೂ ಪರವಾಗಿಲ್ಲ. ನನ್ನ ಸಾವಿನ ಬಗ್ಗೆ ಹಾಗೂ ಬರೆದಿರುವ ಪತ್ರವನ್ನ ಯಾವುದೇ ಮಾಧ್ಯಮಗಳಿಗೂ ಕೊಡಬೇಡಿ ಎಂದು ಕೂಡ ತಿಳಿಸಿದ್ದಾರೆ.
ತಮ್ಮ ನೋವನ್ನ ಅಕ್ಷರಗಳಲ್ಲಿ ಕಾಗದದ ಮೇಲೆ ಇಳಿಸಿ ನೇಣಿಗೆ ಶರಣಾಗಿದ್ದಾರೆ ಸವಿ ಮಾದಪ್ಪ. ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನಲ್ಲಿ ಸವಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಟಿ ಬರೆದಿಟ್ಟಿದ್ದ ಡೆತ್ ನೋಟ್ ಅವರ ಕೈಸೇರಿದೆ. ಸಾವಿಗೂ ಎರಡು ದಿನ ಮೊದಲೇ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ.
ಸವಿ ಮಾದಪ್ಪ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚೌಕಟ್ಟು ಹಾಗೂ ಫನ್ ಚಿತ್ರಗಳಲ್ಲೂ ಕಿರು ಪಾತ್ರಗಳಲ್ಲಿ ನಟಿಸಿದ್ದಾರೆ.








