ಕರ್ನಾಟಕ ರಾಜಕೀಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸರ್ಕಾರದ 6ನೇ ಗ್ಯಾರಂಟಿಯನ್ನು ಘೋಷಿಸಿದ್ದು, ಆಸ್ತಿ ದಾಖಲೆ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಇದು ದೊಡ್ಡ ನೆರವಾಗಲಿದೆ ಎಂದು ಹೇಳಿದ್ದಾರೆ.
“ಬಿ ಖಾತೆ”ಯನ್ನು “ಎ ಖಾತೆ”ಗೆ ಪರಿವರ್ತಿಸಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. “ನನ್ನ ಖಾತಾ – ನನ್ನ ಹಕ್ಕು” ಎಂಬ ಹೆಸರಿನ ಈ ಅಭಿಯಾನವು ಜಿಬಿಎ (ಬೆಂಗಳೂರು ಮಹಾನಗರ ವ್ಯಾಪ್ತಿ) ಒಳಪಡುವ 5 ನಗರ ಪಾಲಿಕೆಗಳಲ್ಲಿ 16-05-2026 ರಂದು ಆರಂಭವಾಗಲಿದೆ.
ಬಹಳ ವರ್ಷಗಳಿಂದ ಬಿ ಖಾತೆ ಸಮಸ್ಯೆಯಿಂದ ಮನೆ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಓಸಿ (Occupancy Certificate) ಇಲ್ಲದೇ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಜನರು ಪರದಾಡುತ್ತಿರುವ ಪರಿಸ್ಥಿತಿ ಇದೆ. ಇದೀಗ ಸರ್ಕಾರದ ಈ ಹೊಸ ಯೋಜನೆ ಆ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶ ಹೊಂದಿದೆ.
ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಭೂ ಗ್ಯಾರಂಟಿಯೇ ನಮ್ಮ ಸರ್ಕಾರದ 6ನೇ ಗ್ಯಾರಂಟಿ. ಜನರಿಗೆ ಅವರ ಹಕ್ಕಿನ ದಾಖಲೆ ಸಿಗಬೇಕು. ಮನೆ ಕಟ್ಟಿಕೊಂಡು ವರ್ಷಗಳಾದರೂ ಕಾನೂನು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರ್ಕಾರ ನ್ಯಾಯ ಕೊಡಲಿದೆ ಎಂದು ತಿಳಿಸಿದ್ದಾರೆ.
ಈ ಘೋಷಣೆ ನಗರ ಪ್ರದೇಶದ ಮಧ್ಯಮ ವರ್ಗ ಹಾಗೂ ಮನೆ ಮಾಲೀಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ವಿರೋಧ ಪಕ್ಷಗಳು ಮಾತ್ರ ಇದನ್ನು ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿರುವ ಯೋಜನೆ ಎಂದು ಟೀಕಿಸುತ್ತಿವೆ. ಆದರೆ ಸರ್ಕಾರ ಮಾತ್ರ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಪ್ರಯತ್ನ ಎಂದು ಸಮರ್ಥಿಸಿಕೊಳ್ಳುತ್ತಿದೆ.







