ಮಹಾತ್ಮ ಗಾಂಧೀಜಿಯ 152ನೇ ಜನ್ಮದಿನ : ಗಣ್ಯರಿಂದ ರಾಷ್ಟ್ರಪಿತನ ಸ್ಮರಣೆ
ನವದೆಹಲಿ : ಇಂದು ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯ 152ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ನವದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದ್ದಾರೆ.
ಇಂದು ಮುಂಜಾನೆ ರಾಜ್ ಘಾಟ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದಂದು ಅವರಿಗೆ ವಿನಮ್ರ ನಮನಗಳು.
ಪೂಜ್ಯ ಬಾಪು ಅವರ ಜೀವನ ಮತ್ತು ಆದರ್ಶಗಳು ದೇಶದ ಪ್ರತಿಯೊಂದು ಪೀಳಿಗೆಯನ್ನು ಕರ್ತವ್ಯದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎಂದು ಬರೆದುಕೊಂಡಿದ್ದರು.
ಇನ್ನು ರಾಜ್ ಘಾಟ್ ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.









