ವಿಶ್ವದ ಮೊದಲ ಮಲೇರಿಯಾ ಲಸಿಕೆಗೆ ಅನುಮೋದನೆ..!
ವಿಶ್ವದ ಮೊದಲ ಮಲೇರಿಯಾ ಲಸಿಕೆಯಾದ RTS,S ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದನೆ ನೀಡಿದೆ. ಈ ಲಸಿಕೆಯನ್ನ ಅದರ ಬ್ರ್ಯಾಂಡ್ ಹೆಸರು ಮಾಸ್ಕಿರಿಕ್ಸ್ ಅಂತಲೂ ಕರೆಯಲಾಗುತ್ತದೆ.
ಸೊಳ್ಳೆಯಿಂದ ಹರಡುವ ಮಲೇರಿಯಾದಿಂದ ಪ್ರಪಂಚದಲ್ಲಿ ವರ್ಷಕ್ಕೆ 400,000 ಕ್ಕೂ ಹೆಚ್ಚು ಜನ ಜೀವ ಕಳೆದುಕೊಳ್ತಿದ್ದು, ಈ ಪೈಕಿ ಹೆಚ್ಚಿನವರು ಆಫ್ರಿನ್ನರು ಅದ್ರಲ್ಲೂ ಮಕ್ಕಳೇ ಆಗಿದ್ದಾರೆ. ಮಾಸ್ಕ್ವಿರಿಕ್ಸ್ ಲಸಿಕೆಯನ್ನು ಬ್ರಿಟಿಷ್ ಔಷಧ ತಯಾರಕ ಕಂಪನಿಯಾದ ಗ್ಲಾಕ್ಸೊ ಸ್ಮಿತ್ ಕ್ಲೈನ್ ಅಭಿವೃದ್ಧಿಪಡಿಸಿದೆ.
ಇನ್ನೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,60,000 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಪ್ರತಿ ವರ್ಷ ಸುಮಾರು 5,00,000 ಮಂದಿ ಮಲೇರಿಯಾದಿಂದ ಸಾವಿಗೀಡಾಗುತ್ತಿದ್ದಾರೆ.
ಅಲ್ಲದೇ ಈ ಲಸಿಕೆ ಯಾವುದೇ ಪರಾವಲಂಬಿ ಜೀವಿಯಿಂದ ಉಂಟಾಗುವ ರೋಗಗಳನ್ನೂ ತಡೆಯುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾಗಿಂತಲೂ ಪರಾವಲಂಬಿ ಜೀವಿಗಳು ಮತ್ತಷ್ಟು ಸಂಕೀರ್ಣವಾಗಿದ್ದು, ಮಲೇರಿಯಾ ತಡೆ ಲಸಿಕೆಗಾಗಿ ಕಳೆದ 100 ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ.
ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯು ಮಲೇರಿಯಾ ಲಸಿಕೆಗೆ ಅನುಮೋದನೆ ನೀಡಿದ್ದು, ಈ ಲಸಿಕೆಯನ್ನು ಆಫ್ರಿಕಾದಾದ್ಯಂತ ಮಕ್ಕಳಿಗೆ ನೀಡುವಂತೆ ಆಗ್ರಹಿಸಿದೆ.








