ಬೆಂಗಳೂರು : ವಲಸೆ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಹಾರಿಹಾಯ್ದಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ ವಲಸೆ ಕಾರ್ಮಿಕರಿಗಾಗಿ ಉಚಿತವಾಗಿ 3 ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಓಡಿಸಲು ಅವಕಾಶ ಮಾಡಿಕೊಟ್ಟಿದೆ.
ಇದರ ಮಧ್ಯೆ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಲು ರಾಜ್ಯ ಕಾಂಗ್ರೆಸ್, ಕೆಎಸ್ ಆರ್ ಟಿಸಿಗೆ 1 ಕೋಟಿ ರೂ ಚೆಕ್ ನೀಡಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರ ಬರೆದಿದ್ದು, ರಾಜ್ಯ ಸರ್ಕಾರದ ಆದೇಶದ ಅನುಗುಣವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಪ್ರಯಾಣಿಕರು ತಮ್ಮ ಊರು ತಲುಪಲಾಗದೆ ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಅನೇಕ ಮಂದಿ ಊಟ, ತಿಂಡಿ, ಬಸ್ ವ್ಯವಸ್ಥೆ ಇಲ್ಲದೆ ರಾಜ್ಯದ ಕೆಎಸ್ ಆರ್ ಟಸಿ ಬಸ್ ನಿಲ್ದಾಣಗಳಲ್ಲಿ ಅನಾಥ ಭಾವದಿಂದ ನರಳುತ್ತಿರುವುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ.
ರಾಜಸ್ತಾನ, ತೆಲಂಗಾಣ, ದೆಹಲಿ, ಸೇರಿದಂತೆ ಅನೇಕ ರಾಜ್ಯಗಳು ಪ್ರಯಾಣಿಕರು ತಮ್ಮ ಊರು ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ. ಪ್ರಜೆಗಳ ಬಗ್ಗೆ ಆ ಸರಕಾರಗಳಿಗಿರುವ ಕಾಳಜಿ ಕರ್ನಾಟಕ ಸರಕಾರಕ್ಕೆ ಇಲ್ಲ. ಬಹುಶಃ ನಮ್ಮ ಸರಕಾರಕ್ಕೆ ತೀವ್ರ ಹಣಕಾಸಿನ ತೊಂದರೆ ಇರಬಹುದು. ಹೀಗಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರ ಯೋಗಕ್ಷೇಮದ ಬಗ್ಗೆ ಚಿಂತಿಸಿಲ್ಲ.
ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು ಕೊರೊನಾ ಕಾಂಗ್ರೆಸ್ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿರುವ ಹಣದಲ್ಲಿ 1 ಕೋಟಿ ರುಪಾಯಿಯನ್ನು ಚೆಕ್ ಮೂಲಕ ನಿಮ್ಮ ಸಂಸ್ಥೆಗೆ ನೀಡುತ್ತಿದ್ದೇನೆ. ಈ ಪತ್ರದ ಜತೆಗೆ ಚೆಕ್ ಲಗತ್ತಿಸಲಾಗಿದೆ. ದಯವಿಟ್ಟು ರಾಜ್ಯದ ಪ್ರಯಾಣಿಕರಿಂದ ನಯಾಪೈಸೆ ತೆಗೆದುಕೊಳ್ಳದೇ ಅವರನ್ನು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಒಂದು ಬಾರಿಗೆ ಉಚಿತವಾಗಿ ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ, ಇನ್ನೂ ಏನಾದರೂ ಹಣದ ಕೊರತೆ ಬಿದ್ದರೆ ತಿಳಿಸಿ. ಅದನ್ನೂ ಕೆಪಿಸಿಸಿಯೇ ಭರಿಸುತ್ತದೆ. ಪ್ರಜೆಗಳ ಕ್ಷೇಮವೇ ನಮ್ಮ ಪರಮ ಕರ್ತವ್ಯ ಎಂದಿದ್ದಾರೆ.