ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್ಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಗುಣಮಟ್ಟ ಕಳಪೆಯಾಗಿದೆ ಎಂಬುದು ಕೇವಲ ಅಪಪ್ರಚಾರವಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಲೋಕಾಯುಕ್ತ ಎಂಟ್ರಿಗೂ ಮುನ್ನವೇ ನಾವು ಎಚ್ಚೆತ್ತಿದ್ದೇವೆ
ಈ ಪ್ರಕರಣವನ್ನು ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಲೋಕಾಯುಕ್ತರು ಪ್ರಕರಣ ಕೈಗೆತ್ತಿಕೊಳ್ಳುವ ಎರಡು ದಿನಗಳ ಮೊದಲೇ ನಾವು ಈ ಬಗ್ಗೆ ಕ್ರಮ ಕೈಗೊಂಡಿದ್ದೆವು. ಅಧಿಕಾರಿಗಳಿಗೆ ಈಗಾಗಲೇ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ಈ ಮೂಲಕ ಇಲಾಖೆಯು ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಸೈಜ್ ಎಡವಟ್ಟು ಒಪ್ಪಿಕೊಂಡ ಸಚಿವರು
ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ ಸಚಿವರು, ಕೆಲವು ಮಕ್ಕಳಿಗೆ ಶೂಗಳ ಅಳತೆಯಲ್ಲಿ ಅಂದರೆ ಸೈಜ್ನಲ್ಲಿ ವ್ಯತ್ಯಾಸವಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳ ಪಾದದ ಅಳತೆಗೆ ತಕ್ಕಂತೆ ಶೂಗಳು ಸಿಗದಿರುವುದು ತಾಂತ್ರಿಕ ಸಮಸ್ಯೆಯಾಗಿರಬಹುದು. ಅಂತಹ ಮಕ್ಕಳಿಗೆ ತಕ್ಷಣವೇ ಸರಿಯಾದ ಸೈಜ್ನ ಶೂಗಳನ್ನು ಬದಲಾಯಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ತನಿಖಾ ಸಮಿತಿಗಳ ರಚನೆ
ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಶಾಲೆಗಳಿಗೆ ಭೇಟಿ ನೀಡಿ ವಿತರಣೆಯಾಗಿರುವ ಶೂಗಳ ಗುಣಮಟ್ಟ ಮತ್ತು ಸೈಜ್ ಬಗ್ಗೆ ಸಮಗ್ರ ವರದಿ ನೀಡಲಿವೆ. ಒಂದು ವೇಳೆ ಎಲ್ಲಾದರೂ ಲೋಪ ಕಂಡುಬಂದರೆ ಅದನ್ನು ತಕ್ಷಣವೇ ಸರಿಪಡಿಸಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲಿದೆ ಎಂದು ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.







