ಯೂಟ್ಯೂಬ್ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ
ಕೇರಳ : ಪ್ರಿಯಕರನಿಂದ ಗರ್ಭಿಣಿಯಾಗಿದ್ದ 17 ವರ್ಷದ ಹುಡುಗಿಯೊಬ್ಬಳು ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಯಾರ ಸಹಾಯವೂ ಇಲ್ಲದೇ ಹೆರಿಗೆ ಮಾಡಿಕೊಂಡಿದ್ದು, ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಅ. 20ರಂದು ಈ ಹುಡುಗಿ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸಿ ಹೊಕ್ಕಳ ಬಳ್ಳಿಯನ್ನು ಕತ್ತರಿಸಿಕೊಂಡಿದ್ದಾಳೆ. ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತಿಳಿದುಬಂದಿದೆ.
ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿ ಗರ್ಭಿಣಿಯಾಗಲು ಕಾರಣನಾಗಿದ್ದ ಆಕೆಯ ಪ್ರಿಯಕರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಇಬ್ಬರೂ ಸಹ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯಲ್ಲೂ ಹೇಳಿಕೊಂಡಿದ್ರು. ಆದ್ರೆ ಹುಡುಗಿಗೆ ಇನ್ನೂವರೆಗೂ 18 ವರ್ಷಗಳ ತುಂಬಿರಲಿಲ್ಲ. ಹೀಗಾಗಿ ಕಾನೂನುಬದ್ಧವಾಗಿ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಲು ಕುಟುಂಬದವರು ಚಿಂತನೆ ನಡೆಸಿದ್ದರು. ಇನ್ನೂ ಬಾಲಕಿಗೆ 18 ವರ್ಷಗಳಾಗದ ಹಿನ್ನೆಲೆ ಪೊಲೀಸರು ಇದನ್ನೂ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸ್ತಾಯಿದ್ದಾರೆ.







