ಬೆಲೆ ಏರಿಕೆ, ಬೈ ಎಲೆಕ್ಷನ್ ರಿಸ್ಟಲ್ಟ್ : ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್
ಬೆಂಗಳೂರು : ದೇಶದಲ್ಲಿ ನಿರಂತರ ಬೆಲೆ ಮತ್ತು ಹಾನಗಲ್ – ಸಿಂದಗಿ ಉಪಚುನಾವಣೆ ಫಲಿತಾಂಶದ ವಿಚಾರವಾಗಿ ಕಾಂಗ್ರೆಸ್ – ಬಿಜೆಪಿ ಟ್ವೀಟ್ ವಾರ್ ಶುರುವಾಗಿದೆ.
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್.. ಜನರಿಗೆ ಬಿಜೆಪಿ ಬೆಲೆ ಏರಿಕೆಯ ‘ದಿವಾಳಿ ಉಡುಗೊರೆ’ ನೀಡಿದೆ! ದೇಶಾದ್ಯಂತ ಜನರು ಬಿಜೆಪಿಗೆ ಸೋಲಿನ ‘ದಿವಾಳಿ ಉಡುಗೊರೆ’ ನೀಡಿದ್ದಾರೆ. ಹಿಮಾಚಲ ಪ್ರದೇಶ, ರಾಜಸ್ಥಾನ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಟ್ವೀಟ್ ಮಾಡಿದೆ.
ಇದಕ್ಕೆ ಟಾಂಗ್ ನೀಡಿರುವ ಬಿಜೆಪಿ, ವೈಯುಕ್ತಿಕ ವರ್ಚಸ್ಸಿನ ಆಧಾರದಲ್ಲಿ ಗೆದ್ದ ಒಂದು ಕ್ಷೇತ್ರದ ಗೆಲುವನ್ನು ನೆಪವಾಗಿರಿಸಿಕೊಂಡು, ದೇಶಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಗಮನಕ್ಕೆ, ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶ ಬಿಜೆಪಿ ಹಾಗೂ ಅಂಗಪಕ್ಷಗಳ ಪರವೇ ಇದೆ.
ಹಾನಗಲ್ ಕ್ಷೇತ್ರದ “ವೈಯಕ್ತಿಕ ವರ್ಚಸ್ಸಿನ” ಒಂದು ಗೆಲುವು ಕಾಂಗ್ರೆಸ್ ನಾಯಕರಿಗೆ ಮರುಭೂಮಿಯಲ್ಲಿ ಒಯಸಿಸ್ ಲಭಿಸಿದ ಹಾಗಾಗಿದೆ. ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶದ ಅವಲೋಕನ ಮಾಡಿದಾಗ “ಎದ್ದಿರುವುದು ಕಾಂಗ್ರೆಸ್ ಪರವಾದ ಅಲೆಯಲ್ಲ, ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ” ಎಂದು ಬಿಜೆಪಿ ಕುಟುಕಿದೆ.









