ಪುಲ್ವಾಮಾ, ಈ ಹೆಸರು ಕೇಳುತ್ತಿದ್ದಂತೆ ಭಾರತೀಯರು ಬೆಚ್ಚಿಬೀಳುತ್ತಾರೆ. ಅವರೊಳಗಿನ ರಕ್ತ, ಉಗ್ರರ ಅಂದಿನ ರಣಹೇಡಿ ಕೃತ್ಯಕ್ಕೆ ಕುದಿಯತೊಡಗುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ ಪುಲ್ವಾಮದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಉಗ್ರರ ಭೀಕರ ಕೃತ್ಯದಿಂದ ರಕ್ತಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಸೈನಿಕರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ದವು. 44 ವೀರಯೋಧರು ಹುತಾತ್ಮರಾಗಿದ್ದರು.
ಅದು ಫೆಬ್ರವರಿ ತಿಂಗಳು. ಹೇಳಿಕೇಳಿ ಜಮ್ಮು ಕಾಶ್ಮೀರ.. ಮಂಜು ಕವಿದ ವಾತಾವರಣ, ಕೊರೆಯುವ ಚಳಿ, ಪ್ರತಿಕೂಲ ಹವಾಮಾನ, ಗುಂಡಿನ ಸದ್ದು ಸರ್ವೇಸಾಮಾನ್ಯ. ಆದರೆ ನಮ್ಮ ವೀರ ಸೈನಿಕರು ಎಂತಹ ಕಠಿಣ ಪರಿಸ್ಥಿತಿಯೇ ಇರಲಿ, ಹಗಲು ರಾತ್ರಿಯೆನ್ನದೆ ತಾಯಿ ಭಾರತಾಂಬೆಯ ಸೇವೆ ಮಾಡುತ್ತಾ ತಮ್ಮ ಜೀವಕ್ಕಿಂತ ಹೆಚ್ಚಾಗಿ ದೇಶವನ್ನು
ಪ್ರೀತಿಸುತ್ತಾರೆ.
ಕಳೆದ ಎರಡು ಮೂರು ದಿನಗಳಿಂದ ವಾತಾವರಣ ಪ್ರಕ್ಷುಬ್ಧವಾಗಿದ್ದ ಕಾರಣ ಸಿ.ಆರ್.ಪಿ.ಎಫ್. ಪಡೆಯ ಯೋಧರಿಗೆ ಜಮ್ಮುವಿನಲ್ಲಿನ ಕರ್ತವ್ಯ ಮುಗಿಸಿ ಮುಂದಿನ ಪಾಳಿ ನಿರ್ಧರಿಸಲು ಕಣಿವೆ ಪ್ರದೇಶದ ರಾಜಧಾನಿ ಶ್ರೀನಗರಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಅವರಲ್ಲಿ ಕೆಲವರು ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾದ ಯೋಧರಿದ್ದರೆ, ಇನ್ನೂ ಕೆಲವರು ಕರ್ತವ್ಯ ಮುಗಿಸಿ ರಜೆಗೆ ತೆರಳುವವರಿದ್ದರು. ಹಾಗಾಗಿ ಅವರ ಶ್ರೀ ನಗರದ ಪಯಣ ಫೆಬ್ರವರಿ14ಕ್ಕೆ ನಿಗದಿಯಾಗಿತ್ತು. ಬೆಳಗಿನ ಜಾವ 78 ಬೆಂಗಾವಲು ವಾಹನದಲ್ಲಿ ಯೋಧರ ಪಯಣ ಜಮ್ಮು- ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿತ್ತು.
ಸುಮಾರು 2500 ಯೋಧರನ್ನು ಹೊತ್ತು ಕೊಂಡ 78ವಾಹನಗಳು ಶ್ರೀನಗರ ಜಮ್ಮು ಹೆದ್ದಾರಿಯ ಅವಂತಿಪೋರಾದ ಲೆಥೊರದ ಬಳಿ ಸಾಗುತ್ತಿದ್ದಂತೆ ಜೈಶ್-ಎ-ಮೊಹಮ್ಮದ್ ಎಂಬ ಪಾಕಿಸ್ತಾನಿ ಉಗ್ರ ಸಂಘಟನೆಯ ಹೇಡಿ ಅದಿಲ್ ಅಹ್ಮದ್ ದಾರ್ ಎಂಬಾತ 350ಕಿ.ಗ್ರಾಂಗಳಷ್ಟು ಸ್ಫೋಟಕಗಳನ್ನು ಹೊತ್ತ ವಾಹನವನ್ನು, ಯೋಧರಿದ್ದ ಬೆಂಗಾವಲಿನ ವಾಹನಗಳ ಸಾಲಿನ ಮೊದಲೆರಡು ಬಸ್ ಗಳ ಮೇಲೆ ನುಗ್ಗಿಸಿದ. ಸುಧಾರಿತ ಸ್ಪೋಟಕಗಳಿಂದ ವಾಹನಗಳ ಜೊತೆ ತನ್ನನ್ನು ತಾನೇ ಸ್ಪೋಟಿಸಿಕೊಂಡ. ಕಿವಿಗಡಚಿಕ್ಕುವ ಸ್ಪೋಟಕ್ಕೆ 44ಮಂದಿ ಭಾರತೀಯ ಸಿ.ಆರ್.ಪಿ.ಎಫ್ ಯೋಧರು ವೀರಮರಣವನ್ನಪ್ಪಿದರು.
ಸುಮಾರು 10-12 ಕಿ.ಮೀಟರ್ ರವರೆಗೆ ಸ್ಪೋಟದ ಸದ್ದು ಭೀಕರವಾಗಿ ಕೇಳಿಸಿದರೆ, 300ಮೀ. ಆಸುಪಾಸಿನಲ್ಲಿದ್ದ ಅಂಗಡಿ ಮುಂಗಟ್ಟುಗಳ ಮಾಲಿಕರು ಭಯಭೀತರಾಗಿ ಬಾಗಿಲು ಮುಚ್ಚಿ ರಕ್ಷಣೆಗಾಗಿ ಒಳಹೊಕ್ಕಿದರು. ಮಾರುಕಟ್ಟೆಯಲ್ಲಿದ್ದ ವ್ಯಾಪಾರಿಗಳು, ಸಾರ್ವಜನಿಕರು ಜೀವ ಉಳಿಸಲು ದಿಕ್ಕುಪಾಲಾಗಿ ಓಡಿದರು. ಘಟನಾ ಸ್ಥಳದ ರಸ್ತೆಯೆಲ್ಲಾ ಯೋಧರ ರಕ್ತದಿಂದ ಕೆಂಪು ಕೆಂಪಾಗಿ ತೊಯ್ದು ಹೋದರೆ, ಯೋಧರ ದೇಹ ಗುರುತಿಸಲಾಗದಷ್ಟು ಛಿದ್ರ ಛಿದ್ರಗೊಂಡು ಸುತ್ತಲೆಲ್ಲಾ ಹರಡಿತ್ತು. ಉಗ್ರದಾಳಿಗೆ ಒಳಗಾದ ವಾಹನ ಲೋಹದ ಮುದ್ದೆಯಂತೆ ಗೋಚರಿಸಿತು.
ಭಾರತಾಂಬೆ ತನ್ನ ಕಂದಮ್ಮಗಳ ಮೇಲೆ ದುಷ್ಕಮಿಗಳು ನಡೆಸಿದ ಅಟ್ಟಹಾಸದಿಂದ ಅಘಾತಗೊಂಡು ಕಣ್ಣೀರು ಸುರಿಸಿದಳು. ಫೆಬ್ರವರಿ 14 2019 ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಯಿತು.