ವಿನಾಶದಂಚಿಗೆ ಸರಿಯುತ್ತಿರುವ ಚಿಪ್ಪುಹಂದಿ (PANGOLIN)ಗಳೆಂಬ ವಿಸ್ಮಯ ಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು?
ಜಗತ್ತಿನಾದ್ಯಂತ ಅತೀ ಹೆಚ್ಚು ಕಳ್ಳಸಾಗಣೆಗೆ ಒಳಗಾಗಿ ಬಹುತೇಕ ನಶಿಸುವ ಹಂತಕ್ಕೆ ತಲುಪಿರುವ ಚಿಪ್ಪುಹಂದಿಗಳನ್ನು ಇತ್ತೀಚಿಗೆ ನೋಡಿದವರೆ ಬಹು ವಿರಳ. ಮಾನವನ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ, ಇದರಿಂದ ಚಿಪ್ಪುಹಂದಿಗಳ ಸ್ವಾಭಾವಿಕ ವಸಾಹತು ನಾಶವಾಗುತ್ತಿದೆ. ಇನ್ನೊಂದೆಡೆ ಇವುಗಳ ಚಿಪ್ಪು, ಅಂಗಾಂಗಗಳಲ್ಲಿ ಕಾಮೋತ್ತೇಜಕ ಗುಣಗಳಿವೆ ಹಾಗು ಕೆಲವು ಸಾಂಪ್ರದಾಯಕ ಔಷಧಿ ತಯಾರಿಸಬಹುದು ಎಂಬ ಮೂಢನಂಬಿಕೆ ಈ ಜೀವಿಯನ್ನು ಅಪಾಯಕ್ಕೆ ಸಿಲುಕಿಸಿದೆ. ಇವುಗಳು ಮಾಂಸಕ್ಕೆ ಬೇಟೆಯಾಡಿದ್ದಕ್ಕಿಂತ ಕಳ್ಳಸಾಗಣೆಗಾಗಿಯೇ ಬಲಿಯಾಗಿದ್ದು ಹೆಚ್ಚು. ಜಾಗತಿಕವಾಗಿ ಚಿಪ್ಪುಹಂದಿಗಳ ಸಂತತಿ ವಿನಾಶದಂಚಿಗೆ ತಂದು ನಿಲ್ಲಿಸಿದ ಕೀರ್ತಿ ಧೂರ್ತ ದುಷ್ಟ ಚೀನಿಯರಿಗೆ ಸಲ್ಲಬೇಕು. ಚಿಪ್ಪುಹಂದಿಗಳ ಚಿಪ್ಪನ್ನು ಅಲಂಕಾರಿಕ ವಸ್ತುಗಳಿಗೆ ಬಳಸಲಾಗುತ್ತದೆ. ಗ್ಲೋಬಲ್ ಚಿಪ್ಪುಹಂದಿಗಳ ಸ್ಮಗ್ಲಿಂಗ್ ರೆಡ್ ರೂಟ್‌ಗೆ ಚೀನಿಯರೇ ಅಡಿಪಾಯ ಹಾಕಿದ್ದು. ಇವುಗಳ ಮಾಂಸವನ್ನು ತಿನ್ನಲು ಶುರುಮಾಡಿದ್ದು ಮೊದಲು ಚೀನಿಯರೇ. ವುಹಾನ್ ಸೇರಿದಂತೆ ಚೀನಾದ ಬಹಳಷ್ಟು ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲಿ ಪರಂಗೋಲಿನ್ ಮಾಂಸಕ್ಕೆ ಬಹುಬೇಡಿಕೆಯಿದೆ.
ಕೋವಿಡ್-19 ಸಾಂಕ್ರಾಮಿಕಕ್ಕೂ ಚಿಪ್ಪು ಹಂದಿ ಕಾರಣ ಎಂದು ಮೊದಮೊದಲು ಗುಲ್ಲೆಬ್ಬಿಸಲಾಗಿತ್ತು. ಭಾರತ ಸೇರಿದಂತೆ ಏಷ್ಯಾದ ಬಹಳಷ್ಟು ದೇಶಗಳಲ್ಲಿ ಚಿಪ್ಪು ಹಂದಿಯ ಕಳ್ಳ ಸಾಗಾಣಿಗೆ ಅನಿಯಂತ್ರಿತವಾಗಿ ನಡೆದಿದೆ. ಹಾರೆ ಗುದ್ದಲಿಯೊಂದಿಗೆ ಕಾಡಿಗೆ ನುಗ್ಗುವ ಅನುಭವಿ ಬೇಟೆಗಾರರು ಯಾವುದೇ ಗುಂಡಿನ ಶಬ್ದ ಮಾಡದೆ, ಬಿಲಗಳಲ್ಲಿ ಇರುವ ಇವನ್ನು ಹೊರತೆಗೆದು ಮಾಂಸ ಚಿಪ್ಪುಗಳಿಗಾಗಿ ಬೇಟೆಯಾಡುತ್ತಿದ್ದಾರೆ. ಇವುಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ, ಹಾಗಾಗಿ
ಚಿಪ್ಪುಹಂದಿಗಳ ಬಗ್ಗೆ ಕೆಲ ಪ್ರಮುಖ ಮಾಹಿತಿಗಳು ಇಲ್ಲಿವೆ. ಎಲ್ಲಾ ಚಿಪ್ಪು ಹಂದಿಗಳು ಫಿಲಿಡೋಟಾ (Pholidota) ಗಣದ ಮೆನಿಡಿಯಾ (Manidae) ಎಂಬ
ಒಂದೇ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ಜಗತ್ತಿನಾದ್ಯಂತ ಒಂದೇ ಜಾತಿ ಎಂಟು ಬೇರೆ ಬೇರೆ ಪ್ರಬೇಧಗಳಿವೆ. ಇವುಗಳು ಹಳೆ ಜಗತ್ತಿನ ಬಹು ಪುರಾತನ ಸಸ್ತನಿಗಳು, ಪ್ರಾಚೀನ ಸಸ್ತನಿಗಳ ಕೆಲವು ಲಕ್ಷಣಗಳನ್ನು ಈಗಲೂ ಉಳಿಸಿಕೊಂಡಿವೆ. ಚಿಪ್ಪು ಹಂದಿಗಳ ಬಾಯಲ್ಲಿ ಹಲ್ಲುಗಳಿಲ್ಲ; ನಾಲಿಗೆ ದೇಹಕ್ಕಿಂತ ಉದ್ದವಾಗಿರುತ್ತದೆ. ಇವುಗಳ ಕಿವಿಗಳು ವಿಶೇಷವಾಗಿ ಬೆಳೆದಿಲ್ಲ. ಆಂಗ್ಲ ಭಾಷೆಯಲ್ಲಿ ಈ ಚಿಪ್ಪು ಹಂದಿಗಳನ್ನು ಪೆಂಗೊಲಿನ್ ಎಂದರೆ, ಮಲಯ ಭಾಷೆಯಲ್ಲಿ ಪೆಂಗ-ಗೋಲಿಂಗ ಎನ್ನುತ್ತಾರೆ.
ಅದರರ್ಥ ಗುಂಡಾಗಿ ಉರುಳು ಎಂದು. ಚಿಪ್ಪು ಹಂದಿಗಳು ಎರಡು ಖಂಡಗಳಿಗೆ ಮಾತ್ರ ಸೀಮಿತವಾಗಿವೆ. ಏಷಿಯಾದಲ್ಲಿ ನಾಲ್ಕು ಹಾಗೂ ಆಫ್ರಿಕಾದಲ್ಲಿ ನಾಲ್ಕು ಪೆಂಗೋಲಿನ್ ಪ್ರಬೇಧಗಳನ್ನು ಕಾಣಬಹುದು.
1) ಇಂಡಿಯನ್ ಚಿಪ್ಪುಹಂದಿ (Indian pangolin)
2) ಚೀನಾ ಚಿಪ್ಪುಹಂದಿ (Chinese pangolin)
3) ಸುಂಡಾ ಚಿಪ್ಪುಹಂದಿ (Sunda pangolin)
4) ಫಿಲಿಫೈನ್ ಚಿಪ್ಪುಹಂದಿ (Philippine pangolin)
5) ಬಿಳಿ ಕತ್ತಿನ ಚಿಪ್ಪುಹಂದಿ (White-bellied pangolin)
6) ಕಪ್ಪು ಕತ್ತಿನ ಚಿಪ್ಪುಹಂದಿ (Black-bellied pangolin)
7) ಜಾಯಿಂಟ್ ಗ್ರೌಂಡ್ ಚಿಪ್ಪುಹಂದಿ (Joint ground pangolin)
8) ಕೇಪ್ ಚಿಪ್ಪುಹಂದಿ (Cape pangolin)
ಇವೇ ಈಗ ಪ್ರಪಂಚಲ್ಲಿ ಕಂಡು ಬರುವ ಒಟ್ಟು 8 ಪ್ರಭೇದಗಳು. ಇವುಗಳಲ್ಲಿ ಬಹಳಷ್ಟು ಪ್ರಬೇಧಗಳು ಅಪಾಯದಂಚಿನಲ್ಲಿದ್ದರೆ, ಮತ್ತೂ ಕೆಲವು ಪ್ರಬೇಧಗಳು ಅಳಿವಿನಂಚಿನಲ್ಲಿವೆ ಎನ್ನುತ್ತದೆ ಐಯುಸಿಎನ್‌ನ ರೆಡ್ ಡೇಟಾ. ಕಪ್ಪು ಕತ್ತಿನ ಚಿಪ್ಪುಹಂದಿ (Black-bellied pangolin) ಚಿಕ್ಕ ಗಾತ್ರ ಹೊಂದಿದ್ದರೆ, ಜಾಯಿಂಟ್ ಗ್ರೌಂಡ್ ಚಿಪ್ಪುಹಂದಿ (Joint ground pangolin) ದೊಡ್ಡ ಗಾತ್ರದ್ದಾಗಿದೆ. ನಮ್ಮ ದೇಶದಲ್ಲಿ ಇಂಡಿಯನ್ ಪೆಂಗೋಲಿನ್ ಹಾಗು ಚೈನೀಸ್ ಪೆಂಗೋಲಿನ್ ಎಂಬ ಎರಡು ಪ್ರಬೇದಗಳಿವೆ. ಇಂಡಿಯನ್ ಪೆಂಗೋಲಿನ್ ಮೈಮೇಲಿನ ಚಿಪ್ಪುಗಳ ಒಟ್ಟು ಸಾಲು 10-13. ಚೈನೀಸ್ ಪೆಂಗೋಲಿನ್ ಆದರೆ 15-18 ಚಿಪ್ಪುಗಳ ಸಾಲು ಹೊಂದಿರುತ್ತವೆ. ಇವು ಹೆಚ್ಚಾಗಿ ನಿಶಾಚರಿಗಳು, ಇವುಗಳ ಆಹಾರ ಗೆದ್ದಲು, ಇರುವೆ ಹಾಗು ಕೆಲ ಹುಳಹುಪ್ಪಟೆಗಳು. ಕಾಡುಗಳಲ್ಲಿ ದೊಡ್ಡ ಹಾಗು ಆಳವಾದ ಬಿಲಗಳನ್ನು ಕೊರೆವ ಸಾಮರ್ಥ್ಯ ಇರುವುದು ಚಿಪ್ಪು ಹಂದಿಗಳಿಗೆ ಮಾತ್ರ. ಇವು ಸುಮಾರು 6-10 ಮೀಟರ್ ಉದ್ದದ ಬಿಲ ಕೊರೆಯಬಲ್ಲವು. ಚಿಪ್ಪುಹಂದಿಗಳು ಕೊರೆದ ಬಿಲಗಳಲ್ಲಿ ಮುಳ್ಳು ಹಂದಿಗಳು ಸಹ ವಾಸಿಸುತ್ತವೆ ಹಾಗೂ ನರಿಗಳು ಮರಿ ಹಾಕುತ್ತವೆ, ಅಷ್ಟೇ ಅಲ್ಲ ಹೆಬ್ಬಾವುಗಳು ಕೂಡಾ ವಾಸಿಸುತ್ತವೆ. ಅಪಾಯ ಬಂದಾಗ ಕೆಲ ಪ್ರಾಣಿಗಳು ಈ ಬಿಲಗಳಲ್ಲಿ ನುಸುಳಿ ತಪ್ಪಿಸಿಕೊಳ್ಳುತ್ತವೆ. ಮರಿ ಹಾಕುವ ಇವು ತಮ್ಮ ಮರಿಗಳನ್ನು ಬೆನ್ನ ಮೇಲೆ ಹೊತ್ತು ಆಹಾರಕ್ಕಾಗಿ ಅಲೆಯುತ್ತವೆ. ಅಪಾಯ ಬಂದಾಗ ಮರಿಯನ್ನ ತನ್ನ ಸುರುಳಿಯಲ್ಲಿ ಮರೆ ಮಾಡುತ್ತದೆ. ನಮ್ಮ ದೇಶದ ಚಿಪ್ಪುಹಂದಿಗಳು ಮರವನ್ನ ಏರುತ್ತವೆ, ಮರದ ಮೇಲಿನ ಇರುವೆ ಗೂಡನ್ನು ಒಡೆದು ಇರುವೆಗಳನ್ನು ಭಕ್ಷಿಸುತ್ತವೆ. ಮುಂದಿನ ಕಾಲಿನಲ್ಲಿರುವ ಬಲಿಷ್ಠ ಉಗುರುಗಳಿಂದ ಗೆದ್ದಲು ಹುತ್ತಗಳನ್ನು ಒಡೆಯಬಲ್ಲದು, ಭಯಗೊಂಡಾಗ ವೇಗವಾಗಿ ಬಿಲ ತೆಗೆಯಬಲ್ಲದು. ತನ್ನ ಉದ್ದವಾದ ಅಂಟಿನಂತಿರುವ ನಾಲಿಗೆಯನ್ನು ಇರುವೆಗಳು ಇರುವ ಜಾಗದಲ್ಲಿ ಬಿಟ್ಟು ಇರುವೆ ಗೆದ್ದಲುಗಳನ್ನು ನೆಕ್ಕಿ ನುಂಗುತ್ತದೆ. ಚಿಪ್ಪುಹಂದಿಗಳು ವಾಸನಾ ಶಕ್ತಿ ಬಹು ತೀಕ್ಷ್ಣ, ಆದರೆ ಚಿಕ್ಕ ಕಣ್ಣುಗಳ ದೃಷ್ಟಿ ಮಾತ್ರ ತೀರಾ ಮಂದ. ಬಾಲದ ಕೆಳಗೆ ತೀಕ್ಷ್ಣ ವಾಸನೆಯ ದ್ರವ ಒಸರುವ ಗ್ರಂಥಿಗಳಿವೆ. ಇವು ದೂರದ ಕಡೆಗೆ ಕಣ್ಣು ಹಾಯಿಸುವಾಗ ಹಿಂದಿನ ಎರಡು ಕಾಲುಗಳ ಮೇಲೆ ಎದ್ದು ನಿಲ್ಲುತ್ತದೆ. ಇತ್ತೀಚಿಗೆ ಇವುಗಳನ್ನ ನೋಡಿದವರು ಹಾಗು ರಕ್ಷಣೆ ಮಾಡಿದವರು ತುಂಬಾ ವಿರಳ, ಅಷ್ಟರ ಮಟ್ಟಿಗೆ ಇವು ಕಳ್ಳ ಬೇಟೆಗೆ ಬಲಿಯಾಗಿ ವಿನಾಶದಂಚು ತಲುಪುತ್ತಿವೆ. ಪ್ರತಿ ವರ್ಷ ಫೆಬ್ರವರಿ ಮೂರನೆ ಶನಿವಾರವನ್ನು ವಿಶ್ವ ಪೆಂಗೊಲಿನ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಅನುಭವ ಇರುವವರು ಕಾಡಿನಲ್ಲಿರುವ ಬಿಲಗಳು
ಹಾಗು ಕಾಡಿನಲ್ಲಿ ಚಿಪ್ಪುಹಂದಿಯ ಕೆಲ ಚಟುವಟಿಕೆಯ ಕುರುಹುಗಳನ್ನು ನೋಡಿಯೇ ಚಿಪ್ಪುಹಂದಿ ಈ ಪ್ರದೇಶದಲ್ಲಿ ಇದೆ ಅಥವಾ ಇಲ್ಲ ಎಂದು ಕಂಡು ಹಿಡಿಯಬಹುದು. ಇಂತಹ ಜಾಗಗಳಲ್ಲಿ ಅರಣ್ಯ ಇಲಾಖೆ ಕ್ಯಾಮರಾ ಅಳವಡಿಸಿ ಆಗಾಗ ಪ್ಯಾಟ್ರೋಲಿಂಗ್ ಮಾಡುತ್ತದೆ. ವೇಗವಾಗಿ ನಶಿಸುತ್ತಿರುವ ಇದರ
ಸಂತಾನವನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಯವರು ಚಿತ್ರದಲ್ಲಿ ಮಾತ್ರ ಚಿಪ್ಪುಹಂದಿಯನ್ನು ನೋಡಬೇಕಾದೀತು.
–
ಹಿಂದವೀ ಸ್ವರಾಜ್ಯ
ನಾಗರಾಜ್ ಬೆಳ್ಳೂರ್, ವನ್ಯಜೀವಿ ಪ್ರಿಯರು ಹಾಗೂ ಹವ್ಯಾಸಿ ಬರಹಗಾರ
ನಿಸರ್ಗ ಕನ್ಸರ್ವೇಷನ್ ಟ್ರಸ್ಟ್