ಚಿಕ್ಕಮಗಳೂರು : ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಕೊರೊನಾ ವೈರಸ್ ಕುರಿತಂತೆ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರಸ್ ಗಳಿಗೆ ಗೌರವ ಸಮರ್ಪಿಸಿ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಅವರು ದೇಶ ಜನರ ಜೀವನ ಉಳಿಸಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮಗೆ ಮರುಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಕೊರೊನಾ ವೈರಸ್ ನಿಂದ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ಸೇವೆಯನ್ನ ದೇಶದ ಯಾರೊಬ್ಬರೂ ಮರೆಯಬಾರದು. ಹಾಗಾಗಿ ಗಾಂಧಿ ಮಾರ್ಗದ ಅನುಯಾಯಿಗಳಾಗಿರುವ ಆಶ್ರಮದ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಗೌರವ ಸೂಚಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಇನ್ನು ಕೊರೊನಾ ವೈರಸ್ ಆತಂಕ ಡಿಸೆಂಬರ್ ವರೆಗೂ ದೇಶವನ್ನ ಕಾಡಬಹುದು. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾವು ಅಗ್ನಿಹೋತ್ರ ಹೋಮ ಹಾಗೂ ರುದ್ರ ಹೋಮ ಮಾಡಬೇಕು. ಸರ್ಕಾರದ ನಿರ್ದೇಶನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರದ ಕಾಪಾಡಿಕೊಳ್ಳಬೇಕು ಎಂದು ವಿನಯ್ ಗುರೂಜಿ ಮನವಿ ಮಾಡಿಕೊಂಡರು.








