ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು ನಡೆಸಿದ ಪ್ರಯತ್ನಗಳ ಕುರಿತು ಹರಿಹಾಯ್ದಿರುವ ಕಾಶಪ್ಪನವರ, ಈಗ ಮಂತ್ರಿಯಾಗಿ ತೋರಿಸಿದ್ದೇನೆ, ನೀವು ಏನು ಮಾಡುತ್ತೀರಿ ಎಂದು ಬಹಿರಂಗವಾಗಿಯೇ ಟಾಂಗ್ ನೀಡಿದ್ದಾರೆ.
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಕಾಶಪ್ಪನವರ, ಸ್ವಾಮೀಜಿಗಳ ಹೆಸರನ್ನು ಎತ್ತದೆ ಜಗದ್ಗುರುಗಳು ಎಂದು ವ್ಯಂಗ್ಯವಾಡಿದರು. ವಿಜಯಾನಂದ ಕಾಶಪ್ಪನವರಗೆ ಮಂತ್ರಿ ಸ್ಥಾನ ನೀಡಬೇಡಿ ಎಂದು ಈ ಜಗದ್ಗುರುಗಳು ಮುಖ್ಯಮಂತ್ರಿಗಳ ಬಳಿ ಹೋಗಿ ಹೇಳಿದ್ದರಂತೆ. ಆದರೆ, ಯಾರು ಬೇಡ ಎನ್ನುತ್ತಾರೋ ಅವರಿಗೇ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅವರು ನನಗೆ ಮಾತು ನೀಡಿದ್ದರು ಮತ್ತು ಅದನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಹಾಕಿಕೊಂಡ ಕಾವಿ ಬಟ್ಟೆಗೆ ಗೌರವ ಕೊಡಿ
ಸ್ವಾಮೀಜಿಯವರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾವಿ ಧರಿಸಿದವರು ಅದಕ್ಕೆ ವಿಧೇಯರಾಗಿರಬೇಕು. ನಾವು ರಾಜಕಾರಣಿಗಳು ಖಾದಿ ಹಾಕುತ್ತೇವೆ, ಪೊಲೀಸರು ಖಾಕಿ ಹಾಕುತ್ತಾರೆ. ಪ್ರತಿಯೊಬ್ಬರೂ ತಾವು ಧರಿಸುವ ಬಟ್ಟೆ ಮತ್ತು ಇರುವ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಬೇಕು. ಸಮಾಜ ನಮಗೆ ಒಂದು ಗೌರವದ ಸ್ಥಾನ ನೀಡಿದಾಗ ಅದಕ್ಕೆ ತಕ್ಕಂತೆ ಇರಬೇಕು. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಮಾತನಾಡಿದರೆ ಜನರು ಒಪ್ಪುವುದಿಲ್ಲ ಎಂದು ಕಿಡಿಕಾರಿದರು.
ನೈತಿಕತೆ ಎಲ್ಲಿ ಹೋಯಿತು?
ಕಾಂಗ್ರೆಸ್ ಸರ್ಕಾರ ಇರುವವರೆಗೆ ಯಾವುದೇ ಮುಖ್ಯಮಂತ್ರಿಯ ಮನೆ ಮೆಟ್ಟಿಲು ಹತ್ತುವುದಿಲ್ಲ ಎಂದು ಈ ಹಿಂದೆ ಸ್ವಾಮೀಜಿ ಪ್ರಮಾಣ ಮಾಡಿದ್ದರು. ಆದರೆ ಈಗ ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ದೀರಿ, ನಿಮ್ಮ ನೈತಿಕತೆ ಈಗ ಎಲ್ಲಿದೆ ಎಂದು ಕಾಶಪ್ಪನವರ ಪ್ರಶ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನ ನಡೆಸಿದರೂ, ಭಗವಂತ ನನ್ನ ಕೈ ಹಿಡಿದಿದ್ದಾನೆ. ನೂರು ಜನ ಕೊಲ್ಲುವವರು ಇದ್ದರೂ ಕಾಯುವವನು ಒಬ್ಬ ಇದ್ದೇ ಇರುತ್ತಾನೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಸಚಿವ ಸ್ಥಾನ ಸಿಕ್ಕಿದ ಬೆನ್ನಲ್ಲೇ ಕಾಶಪ್ಪನವರ ನೀಡಿರುವ ಈ ಹೇಳಿಕೆ ಪಂಚಮಸಾಲಿ ಸಮಾಜ ಮತ್ತು ಮಠದ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.








