ನವದೆಹಲಿ : ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ದೇಶದ ಅರ್ಧದಷ್ಟು ನಾಗರೀಕರಿಗೆ ತಲಾ 7500 ರೂಪಾಯಿ ನಗದು ಹಣವನ್ನ ನೇರವಾಗಿ ಕೊಡಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ವಲಸೆ ಕಾರ್ಮಿಕರ ಸಂಕಷ್ಟದ ಕುರಿತು ಇಂದು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೊದಲು ನ್ಯಾಯ್ ಯೋಜನೆಯನ್ನ, ಅಥವಾ ಅದನ್ನ ಏನು ಬೇಕಾದ್ರೂ ಕರೆಯಿರಿ, ಮೊದಲು ಜಾರಿಗೆ ತನ್ನಿ. ಪ್ರಧಾನಮಂತ್ರಿ ಯೋಜನೆ ಬೇಕಾದ್ರೂ ಅನುಷ್ಠಾನಕ್ಕೆ ತನ್ನಿ. ಆದ್ರೆ ತಕ್ಷಣವೇ, ದೇಶದ ಶೇ. 50ರಷ್ಟು ಜನರಿಗೆ ತಲಾ 7500 ರೂಪಾಯಿ ನಗದು ಹಣ ಕೊಡಬೇಕು. ಇದನ್ನ ಸುಲಭವಾಗಿ ಮಾಡಬಹುದು. ಇದೊಂದು ಎಮರ್ಜೆನ್ಸಿ ಎಂದು ಹೇಳಿದ್ದಾರೆ.
ಇನ್ನು ರಾಷ್ಟ್ರ ಮಟ್ಟದಲ್ಲಿ ಕೆಂಪು, ಕಿತ್ತಳೆ ಹಾಗೂ ಹಸಿರು ಝೋನ್ ಗಳನ್ನು ವಿಂಗಡಿಸಿದ್ದಾರೆ. ಆದ್ರೆ ಇದನ್ನ ರಾಜ್ಯಗಳ ಮಟ್ಟದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ನಿರ್ಧರಿಸಬೇಕು. ರಾಷ್ಟ್ರಮಟ್ಟದಲ್ಲಿ ಕೆಂಪು ವಲಯವಾಗಿರೋ ಪ್ರದೇಶಗಳು, ಅಸಲಿಗೆ ಹಸಿರು ವಲಯಗಳಾಗಿವೆ. ಹಸಿರು ವಲಯಗಳು ಕೆಂಪು ವಲಯಗಳಾಗಿವೆ ಎಂದು ನಮ್ಮ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಪಾರದರ್ಶಕತೆ ಇರಬೇಕು. ಕೊರೊನಾ ವೈರಸ್ ಲಾಕ್ ಡೌನ್ ಯಾವಾಗ ತೆರವಾಗುತ್ತದೆ ಎಂದು ಪ್ರಶ್ನಿಸಿದ ರಾಹುಲ್, ತೆರವು ಮಾಡಲು ಮಾನದಂಡಗಳೇನು ಅನ್ನೋದು ನಮಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.








