ನವದೆಹಲಿ : ಕೋವಿಡ್-19 ಮಾರಕ ರೋಗವಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಬಗ್ಗೆ ಜನರಲ್ಲಿ ಇರುವ ಭಯವನ್ನು ಅಳಿಸಿಹಾಕಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಅದು ಮಾರಕ ರೋಗವಲ್ಲ ಎಂದು ತಿಳಿಸಬೇಕು. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು, ಕಷ್ಟದಲ್ಲಿರುವ ಜನರಿಗೆ ವಿಳಂಬ ಮಾಡದೇ ನೇರ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್-19 ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಸಾಮಾನ್ಯ ಸ್ಥಿತಿಯನ್ನು ತರಲು ಸಮಯದ ಅವಶ್ಯಕತೆಯಿದೆ. ವಯಸ್ಸಾದವರು, ಮಧುಮೇಹಿಗಳು ಮತ್ತು ಉಸಿರಾಟದ ವೈದ್ಯಕೀಯ ಪರಿಸ್ಥಿತಿ ಇರುವವರಿಗೆ ಮಾತ್ರ ಕೊರೊನಾ ಅಪಾಯಕಾರಿಯಾಗಿದೆ. ಹೀಗಾಗಿ ದುಡಿಯುವ ವರ್ಗಗಳ ಮಾನಸಿಕ ಬದಲಾವಣೆಯ ಅವಶ್ಯಕತೆಯಿದೆ. ಜನರಲ್ಲಿರುವ ಕೊರೊನಾ ಭಯವನ್ನು ಕಡಿಮೆ ಮಾಡಬೇಕಿದೆ ಎಂದು ರಾಹುಲ್ ಗಾಂಧಿ, ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
ಲಾಕ್ ಡೌನ್ ಗೂ ಮುನ್ನ ಕೋವಿಡ್-19 ಮಾರಣಾಂತಿಕ ಕಾಯಿಲೆಯಾಗಿರಲಿಲ್ಲ. ಕೊರೊನಾ ವೈರಸ್ ಸೋಂಕಿತರಲ್ಲಿ ಶೇ.1ರಷ್ಟು ಜನರಿಗೆ ಮಾತ್ರ ಪರಿಣಾಮ ಬೀರುತ್ತದೆ. ಇದು ಎಲ್ಲರಿಗೂ ಮಾರಕ ರೋಗವಲ್ಲ ಎಂಬ ಅರಿವನ್ನು ಸರ್ಕಾರ ಮೂಡಿಸಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.








