“ಬಂಡುಕೋರ” : ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ Laxmi Hebbalkar saaksha tv
ಬೆಳಗಾವಿ : ಕುಂದಾನಗರಿಯಲ್ಲಿ ಪರಿಷತ್ ಚುನಾವಣಾ ಕಾವು ರಂಗೇರಿದೆ. ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಎಂಬಂತೆ ಚುನಾವಣೆ ನಡೆಯುತ್ತಿದೆ.
ಈ ಇಬ್ಬರ ಮಧ್ಯೆಯೂ ವಾಕ್ಸಮರ ನಡೆಯುತ್ತಿದ್ದು, ಇದೀಗ ರಮೇಶ್ ಜಾರಕಿಹೊಳಿ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಬಂಡುಕೋರ ಎಂದಿದ್ದಾರೆ.
ರಾಯಭಾಗ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಯವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ದರು.
ಇಲ್ಲಿ ಬಂಡುಕೋರರಾಗಿ ಅವರಿಗೆ ಸಮಾಧಾನ ಸಿಗಲಿಲ್ಲ. ಈಗ ಅವರು ಬಿಜೆಪಿ ಪಕ್ಷಕ್ಕೆ ಹೋಗಿದ್ದು, ಅಲ್ಲಿಯೂ ಬಂಡುಕೋರ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಬಾಯಿ ತೆಗೆದರೆ ರಾಮ ರಾಮ ಅಂತ ಹೇಳುತ್ತಾರೆ. ಒಬ್ಬ ಮಹಿಳಾ ಶಾಸಕಿ ಬಗ್ಗೆ ಹೀನವಾಗಿ ಮಾತನಾಡಿದ್ದಾರೆ.
ಒಬ್ಬಳು ಶಾಸಕಿಗೆ ಕಿಮ್ಮತ್ತು ನೀಡದವರು ಮಹಿಳೆಗೆ ಗೌರವ ಕೊಡುತ್ತಾರಾ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಬಳಿ ಪತ್ರಕರ್ತರು ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಪ್ರಶ್ನೆ ಮಾಡಿದ್ದರು.
ಆ ವೇಳೆ ರಮೇಶ್ ಜಾರಕಿಹೊಳಿ ಥೂ ಥೂ ಎಂದು ಅಲ್ಲಿಂದ ಹೊರಟಿದ್ದರು. ಈ ವಿಚಾರವಾಗಿ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.









