ಆಂಧ್ರಪ್ರದೇಶ : ವಿಶಾಖಪಟ್ಟಣ ಅನಿಲ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರಕ್ಕೆ ಸಂಬಂಧಪಟ್ಟಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ 30 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್ ಜಿ ಪಾಲಿಮರ್ಸ್ ಎಂಬ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ವಿಷಾನಿಲ ಸ್ಫೋಟವಾಗಿತ್ತು. ಈ ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಸುಮಾರು 300 ಜನರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಘಟನೆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ಜಗನ್ ಮೋಹನ್ ರೆಡ್ಡಿ ಮೃತಕುಟುಂಬಗಳಿಗೆ ಸಾಂತ್ವನ ಹೇಳಿ, ತಲಾ ಒಂದು ಕೋಟಿ ಪರಿಹಾರ ಘೋಷಿಸಿದ್ದರು. ತೀವ್ರವಾಗಿ ಗಾಯಗೊಂಡು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 10 ಲಕ್ಷ ನೀಡುವುದಾಗಿ ಪ್ರಕಟಿಸಿದ್ದರು.
ಎರಡು ಅಥವಾ ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ 1 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ಪರಿಹಾರ ಘೋಷಿಸಿದ್ದರು. ಇನ್ನು ಘಟನೆಯಲ್ಲಿ ಬಾಧಿತ ಎಲ್ಲ ಕುಟುಂಬಗಳಿಗೆ ಹತ್ತು ಸಾವಿರ ನೀಡುವುದಾಗಿ ಹೇಳಿದ್ದರು. ಜೊತೆಗೆ ಮೃತ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು.
ಇದೀಗ ಕೊಟ್ಟ ಮಾತಿನಂತೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಹಾರ ಹಣವನ್ನು ಬಿಡುಗಡೆಗೊಳಿಸಿದ್ದು, ಜನಪರ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.








